

ಹುಣಸೂರು: ಇಲ್ಲಿನ ನಗರಸಭೆ ಮುಂಭಾಗವಿರುವ ಮುನೇಶ್ವರ ಕಾವಲ್ ಮೈದಾನವು ದಶಕಗಳ ಹಿಂದೆ ಸಾರ್ವಜನಿಕವಾಗಿ ಆಯೋಜನೆಗೊಳ್ಳುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳ ಆಚರಣೆ, ರಾಜಕೀಯ ಸಮಾವೇಶ, ಕ್ರೀಡಾಕೂಟ, ಗಣೇಶೋತ್ಸವಕ್ಕೆ ಸೀಮಿತವಾಗಿಲ್ಲ. ಬದಲಾಗಿ ನಗರಸಭೆ ತನ್ನ ಆದಾಯವನ್ನು ಹೆಚ್ಚಿಸಿಕೊಂಡು ನಾಗರಿಕರಿಗೆ ಉತ್ತಮ ಸೇವೆ ನೀಡಲು ಮೈದಾನವನ್ನು ವಾಣಿಜ್ಯ ಉದ್ದೇಶಕ್ಕಾಗಿ ನೀಡುತ್ತಿದ್ದೇವೆ ಎನ್ನುವ ಬೇಜವಾಬ್ದಾರಿಯುತ ಮಾತುಗಳನ್ನು ಜವಾಬ್ದಾರಿ ಹೊತ್ತವರು ಮಾತನಾಡುತ್ತಿರುವುದು ವಿಪರ್ಯಾಸದ ಸಂಗತಿ.
ಸುಮಾರು 4 ಎಕರೆಯಷ್ಟು ವಿಶಾಲವಾದ ಈ ಮೈದಾನದ ಎರಡೂ ಬದಿಯಲ್ಲೂ ಪಾನಿಪುರಿ, ಚುರುಮುರಿ, ಫಾಸ್ಟ್‌ಪುಡ್ ಅಂಗಡಿಗಳ ಅಡ್ಡೆಯಾಗಿದ್ದರೆ, ಮತ್ತೊಂದು ಕಡೆ ಕನಿಷ್ಠ 20 ಖಾಸಗಿ ಬಸ್‌ಗಳು, ಮಿನಿಬಸ್‌ಗಳು ಕೆಲವೊಮ್ಮೆ ಲಾರಿಗಳು ನಿಲ್ಲುವ ಪಾರ್ಕಿಂಗ್ ಲಾಟ್‌ಗಳಾಗಿವೆ. ವರ್ಷದಲ್ಲಿ ಮೂರು ತಿಂಗಳು ಅಮ್ಯೂಸ್‌ಮೆಂಟ್ ಪಾರ್ಕ್ ಮಾಡುವುದರಿಂದ ಇಡೀ ಮೈದಾನದಲ್ಲಿ ಜಾಗವೇ ಇಲ್ಲದಂತಾಗುತ್ತದೆ. ಈ ನಡುವೆ ಯಾವುದಾದರೊಂದು ಕಂಪನಿ ತನ್ನ ವಾಹನಗಳ ಪ್ರಮೋಷನ್‌ಗಾಗಿ ಗುಡಾರ ಹಾಕಿಕೊಂಡು ವಾರಗಟ್ಟಲೇ ವಹೀವಾಟು ನಡಸುತ್ತವೆ. ಬೆಳಗಿನ ಜಾವ ಮತ್ತು ಸಂಜೆ ವಾಲಿಬಾಲ್, ಕ್ರಿಕೆಟ್ ಮುಂತಾದ ಕ್ರೀಡೆಗಳನ್ನು ಆಡುತ್ತಿದ್ದ ಯುವಕರ ತಂಡ ಇದೀಗ ಇತ್ತ ಮುಖ ಮಾಡುವುದನ್ನೇ ಬಿಟ್ಟಿವೆ.
ಮೈದಾನದ ಸುತ್ತಲೂ ಹಾಕಿದ್ದ ವಾಕಿಂಗ್ ಪಾತ್‌ನಲ್ಲಿ ದಿನಂಪ್ರತಿ ಆಬಾಲವೃದ್ಧರಾದಿಯಾಗಿ 800ರಿಂದ 1000 ನಾಗರಿಕರು ವಾಕಿಂಗ್ ಮಾಡುತ್ತಿದ್ದರು. ಈಗ ಈ ಪ್ರಮಾಣ ಕೇವಲ ನೂರಿನ್ನೂರಕ್ಕೆ ಇಳಿದಿದೆ. ಮೈದಾನದ ಮೂರೂ ಕಡೆಗಳಲ್ಲಿ ಅಳವಡಿಸಿರುವ ಗೇಟ್‌ಗಳನ್ನು ಮುಚ್ಚುವ ಪದ್ಧತಿಯೂ ಇಲ್ಲ, ಮುಚ್ಚಲೂ ಆಗುವುದಿಲ್ಲ ಎನ್ನುವ ಮಟ್ಟಿಗೆ ಪರಿಸ್ಥಿತಿ ಇದೆ. ತಾತ್ಕಾಲಿಕವಾಗಿ ಬದಲಿ ವ್ಯವಸ್ಥೆಯಾಗುವವರೆಗೆ ಪಾನಿಪೂರಿ ಅಂಗಡಿಗೆ ಮೈದಾನದಲ್ಲಿ ಅವಕಾಶ ನೀಡಿ ಬರೋಬ್ಬರಿ 7 ವರ್ಷಗಳೇ ಸಂದರೂ ಇಂದಿಗೂ ತಾತ್ಕಾಲಿಕ ಅವಧಿ ಮುಗಿಯುತ್ತಿಲ್ಲ. ಹುಣಸೂರು ನಗರವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚಿನ ವಿವಿಧ ಸಂಘಟನೆಗಳು, ಸರ್ಕಾರೇತರ ಸಂಘಸಂಸ್ಥೆಗಳು ಕ್ರಿಯಾಶೀಲವಾಗಿದ್ದರೂ ಈ ವಿಷಯದ ಕುರಿತು ಮೌನವಹಿಸಿರುವುದು ಆಶ್ಚರ್ಯ ಮೂಡಿಸಿದೆ. ನಾಗರಿಕರು ಕೂಡ ನಗರಸಭೆಯ ಹಣೆಬರಹವೇ ಇಷ್ಟು ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಸಮಸ್ಯೆ ಪರಿಹಾರ ಹೇಗೆ ಎಂಬ ಕುರಿತು ನಾಗರಿಕರು ಮತ್ತು ಸಂಬಂಧಪಟ್ಟವರು ವಿಜಯವಾಣಿಯಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.
ಸಕ್ಷಮ ಪ್ರಾಧಿಕಾರದಿಂದ ವರದಿ
ನಗರದ ಹೃದಯ ಭಾಗದಲ್ಲಿರುವ ಈ ಮೈದಾನದಲ್ಲಿ ವಾಣಿಜ್ಯ ಚಟುವಟಿಕೆಗಳೇ ಹೆಚ್ಚಾಗುತ್ತಿದ್ದು, ವಾಯುವಿಹಾರಕ್ಕೆ ಅಡ್ಡಿಯುಂಟಾಗುತ್ತಿದೆ ಎನ್ನುವು ದೂರುಗಳು ನನಗೂ ಬಂದಿದೆ. ಈ ಕುರಿತು ಸಕ್ಷಮ ಪ್ರಾಧಿಕಾರದಿಂದ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಕುರಿತು ವರದಿ ನೀಡಲು ಸೂಚಿಸುತ್ತೇನೆ. ನಾಗರಿಕರ ಅನುಕೂಲಕ್ಕಾಗಿ ವಾಕಿಂಗ್ ಪಾತ್ ಕೂಡ ಇದ್ದು, ಇಡೀ ಮೈದಾನ ಸಾರ್ವಜನಿಕರ ಅನುಕೂಲಕ್ಕಾಗಿ ಬಳಕೆಯಾಗಬೇಕಿದೆ.
ಎಚ್.ಬಿ.ವಿಜಯಕುಮಾರ್ ಉಪವಿಭಾಗಾಧಿಕಾರಿ, ಹುಣಸೂರು ಉಪವಿಭಾಗ
ಮಾಯವಾಗಿದೆ ಶುಚಿತ್ವ
ಬೆಳಗಿನ ಜಾವ ಇಡೀ ಮೈದಾನ ಕಸದ ರಾಶಿಯಾಗಿರುತ್ತದೆ. ಅಲ್ಲಲ್ಲಿ ಮದ್ಯದ ಬಾಟಲಿಗಳೂ ಬಿದ್ದಿರುತ್ತವೆ. ಪೌರಕಾರ್ಮಿಕರು ಇಡೀ ಮೈದಾನವನ್ನು ಸ್ವಚ್ಛಗೊಳಿಸುವಲ್ಲೇ ಸುಸ್ತಾಗುತ್ತಿದ್ದಾರೆ. ವಾಯುವಿಹಾರ, ಮಕ್ಕಳಿಗೆ ಆಟೋಟಗಳಿಗೆ ಮಾತ್ರ ಮೈದಾನ ಮೀಸಲಿಡಬೇಕು. ನಗರಸಭೆಯ ಈ ನಡೆ ಖಂಡನೀಯ. ನಾಗರಿಕರಿಗೆ ಅನುಕೂಲ ಮಾಡಿಕೊಡುವ ಬದಲು ಅನನುಕೂಲ ಮಾಡಿಕೊಡುವುದು ಸರಿಯಲ್ಲ. ಇಲ್ಲಿನ ಪರಿಸರ ಶೀಘ್ರ ಬದಲಾಗಲಿ.
ಶಾರದಾ ವಳಗೆರೆ ಹುಣಸೂರು
ಫುಡ್‌ಜೋನ್ ಯಾವಾಗ ಸರ್?
6-7 ವರ್ಷಗಳಿಂದ ಬೀದಿಬದಿಯ ಪಾನಿಪೂರಿ ಮತ್ತು ಫಾಸ್ಟ್‌ಫುಡ್ ವ್ಯಾಪಾರಿಗಳಿಗೆ ಫುಡ್ ಜೋನ್ ಸ್ಥಾಪಿಸಲಾಗುವುದೆಂದು ನಗರಸಭೆ ಆಶ್ವಾಸನೆ ನೀಡುತ್ತಲೇ ಬಂದಿದೆ. ಇಂದಿಗೂ ಕಾರ್ಯಗತವಾಗಿಲ್ಲ. ನಗರದ ಹೃದಯ ಭಾಗದಲ್ಲಿರುವ ಈ ಮೈದಾನ ದುರ್ಬಳಕೆಯಾಗುತ್ತಿದೆ. ಯಾರಾದರೂ ಶೆಡ್ ಹಾಕಿಕೊಂಡು ವಾಸ್ತವ್ಯ ಹೂಡಿದರೂ ನಗರಸಭೆ ಕೇಳುವುದಿಲ್ಲವೇನೋ? ಬೇಜವಾಬ್ದಾರಿ ಅಧಿಕಾರಿಗಳ ನಡೆ ಸರಿಯಲ್ಲ.
ನಾಗಣ್ಣ ದೇವಾಡಿಗ ಹುಣಸೂರು
ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಪರವಾನಗಿ
ಮೈದಾನದ ಸುತ್ತ ವಸತಿ ಪ್ರದೇಶವಿದ್ದರೂ ಪ್ರತಿ ವರ್ಷ ಮೂರು ತಿಂಗಳ ಅವಧಿಗೆ ಅಮ್ಯೂಸ್‌ಮೆಂಟ್ ಪಾರ್ಕ್ ಅಳವಡಿಸಲು ನಗರಸಭೆ ಪರವಾನಗಿ ನೀಡಲಾಗುತ್ತದೆ. ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗಬಾರದೆಂಬ ನಿಯಮವಿದ್ದರೂ ಡೋಂಟ್ ಕೇರ್ ಎನ್ನುತ್ತಾರೆ ಅಧಿಕಾರಿಗಳು. ಜಾಯಿಂಟ್ ವ್ಹೀಲ್, ಟೈಟಾನಿಕ್ ಸೇರಿದಂತೆ 20ಕ್ಕೂ ಹೆಚ್ಚು ಕುಟುಂಬಗಳು ವಿವಿಧ ಮನೋರಂಜನಾ ವಿಧಗಳನ್ನು ಅಳವಡಿಸುತ್ತಾರೆ. ಈ ಕುಟುಂಬಗಳಿಗೆ ಶೌಚಗೃಹದ ಸೌಲಭ್ಯವಿರುವುದಿಲ್ಲ. ಎಲ್ಲವೂ ಮೈದಾನದಲ್ಲೇ. ಇದು ಹುಣಸೂರು ನಗರದ ಪರಿಸ್ಥಿತಿ.
ಪ್ರಕಾಶ್ ಡೀಡ್ ಸಂಸ್ಥೆ, ಹುಣಸೂರು
ಅಧಿಕಾರಿಗಳ ಜೇಬು ಭರ್ತಿ
ಹುಣಸೂರು ನಗರಸಭೆ ಮಾಲೀಕತ್ವದ 100ಕ್ಕೂ ಹೆಚ್ಚು ಮಳಿಗೆಗಳನ್ನು ತನ್ನ ವಶಕ್ಕೆ ಪಡೆದು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ನಗರಸಭೆ ವಿಫಲವಾಗಿದ್ದು, ಆದಾಯ ಖೋತಾ ಆಗಿದೆ. ಅದನ್ನು ಬಿಟ್ಟು ನಗರಸಭೆ ಮೈದಾನವನ್ನು ವಾಣಿಜ್ಯ ಉದ್ದೇಶಕ್ಕೆ ನೀಡಿ ಹುಣಸೂರನ್ನು ಅಭಿವೃದ್ಧಿಪಡಿಸುತ್ತಾರೆ ಎನ್ನುವುದು ಕುಚೋದ್ಯವಲ್ಲದೆ ಮತ್ತೇನೂ ಅಲ್ಲ. ಇಡೀ ನಗರಸಭೆ ಅಧಿಕಾರಿಗಳು ಮತ್ತು ಕೌನ್ಸಿಲರ್‌ಗಳು ಇದರಲ್ಲಿ ಪಾಲು ಹೊಂದಿದ್ದು, ಎಲ್ಲರ ಜೇಬು ಭರ್ತಿ ಯೋಜನೆ ಇದಾಗಿದೆ.
ಎಚ್.ಕೆ.ಸುರೇಶ್ ಹುಣಸೂರು
ಹೋರಾಟ ನಡೆಸಲಿದ್ದೇವೆ
ನಗರದ ತಾಲೂಕು ಕ್ರೀಡಾಂಗಣ ದುರವಸ್ಥೆಯ ತಾಣವಾಗಿದ್ದು, ಮಕ್ಕಳು, ಹಿರಿಯರು ಎಲ್ಲರೂ ಸಂಜೆ ಮತ್ತು ಬೆಳಗ್ಗೆ ಈ ಮೈದಾನವನ್ನು ಆಟೋಟಕ್ಕೆ ವಾಯುವಿಹಾರಕ್ಕೆ ಬಳಸುತ್ತಿದ್ದರು. ಆದರೆ ಇದೀಗ ಮೈದಾನದಲ್ಲಿ ಕಾಲಿಡಲೂ ಜಾಗವಿಲ್ಲದ ಪರಿಸ್ಥಿತಿ ಎದುರಾಗಿದೆ. ನಗರಸಭೆ ಆಡಳಿತ ಜನರ ಮನಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನಗರಸಭೆ ನರಕಸಭೆಯಾಗಿ ನಾಗರಿಕರಿಗೆ ನರಕ ತೋರಿಸುತ್ತಿದೆ. ಈ ಹಿಂದಿನಂತೆ ಮೈದಾನವನ್ನು ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಸುವಂತೆ ಮಾಡಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಇತರ ಸಂಘಟನಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಿ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣುವಂತಾಗಲು ಕ್ರಮ ವಹಿಸಲಾಗುವುದು.
ಪುರುಷೋತ್ತಮ್ ಜಿಲ್ಲಾಧ್ಯಕ್ಷ, ಕರವೇ
ಅಧಿಕಾರ ಕೊಟ್ಟವರ‌್ಯಾರು?
ಸಾರ್ವಜನಿಕರ ಆಸ್ತಿಯನ್ನು ಅನ್ಯ ಉದ್ದೇಶಕ್ಕೆ ಬಳಸಲು ನಗರಸಭೆಗೆ ಅಧಿಕಾರ ನೀಡಿದವರ‌್ಯಾರು? 10 ವರ್ಷಗಳ ಹಿಂದೆ ಲೋಕಾಯುಕ್ತ ನ್ಯಾಯಾಧೀಶರು ಈ ಮೈದಾನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಬಾರದೆಂದು ಸೂಚನೆ ನೀಡಿದ್ದಾರೆ. ಅದನ್ನೂ ನಗರಸಭೆ ಉಲ್ಲಂಘಿಸುತ್ತಿದೆ. ನಗರಸಭೆಯ ಆಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಇವರು ಮೈದಾನವನ್ನು ಹಣ ಮಾಡುವ ದಂಧೆಯನ್ನಾಗಿಸಿಕೊಂಡಿದ್ದಾರೆ. ನಾಗರಿಕರು ಎಚ್ಚೆತ್ತುಕೊಳ್ಳದ ಹೊರತು ಸಮಸ್ಯೆ ಪರಿಹಾರ ಕಾಣುವುದಿಲ್ಲ.
ಇಂಟೆಕ್ ರಾಜು ಜಿಲ್ಲಾಧ್ಯಕ್ಷ, ಮಾಹಿತಿ ಹಕ್ಕು ಮತ್ತು ಮಾನವ ಹಕ್ಕು ಸಂರಕ್ಷಣಾ ವೇದಿಕೆ, ಹುಣಸೂರು
ವಿದ್ಯಾರ್ಥಿಗಳಿಗೆ ಅನ್ಯಾಯ
ಹುಣಸೂರು ನಗರ ವ್ಯಾಪ್ತಿಯಲ್ಲಿ ಕನಿಷ್ಠ 5-6 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಾಲೂಕು ಕ್ರೀಡಾಂಗಣ ನಿರ್ವಹಣೆ ಇಲ್ಲದ ಕಾರಣ ಎಲ್ಲರೂ ಈ ಮೈದಾನವನ್ನೇ ಅವಲಂಬಿಸಿದ್ದಾರೆ. ಹೀಗಿದ್ದೂ ನಗರಸಭೆಯವರು ತಮ್ಮ ಬೇಳೆ ಬೇಯಿಸಿಕೊಳ್ಳಲು ವಾಣಿಜ್ಯ ಉದ್ದೇಶಕ್ಕೆ ಇದನ್ನು ನೀಡುವುದು ಯಾವ ನ್ಯಾಯ? ಕನಿಷ್ಠ 2-3 ಮೈದಾನಗಳ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿರುವ ನಗರಸಭೆಗೆ ಧಿಕ್ಕಾರ.
ಚಲುವರಾಜು ತಾಲೂಕು ಅಧ್ಯಕ್ಷ, ಪ್ರಜಾಪಾರ್ಟಿ, ಹುಣಸೂರು
ಮದ್ಯದ ಬಾಟಲಿಗಳ ತಾಣ
ಕಂದಾಯ ಪಾವತಿಸಲು ಬರುವ ನಾಗರಿಕರನ್ನು ಗೋಳು ಹೊಯ್ದುಕೊಳ್ಳುವ, ತನ್ನ ಆಸ್ತಿಯನ್ನೇ ಉಳಿಸಿಕೊಳ್ಳಲು ವಿಫಲವಾಗಿರುವ, ನಾಗರಿಕರಿಗೆ ಮೂಲಸೌಕರ್ಯ ನೀಡಲು ವಿಫಲವಾಗಿರುವ ನಗರಸಭೆಯಿಂದ ಇದಕ್ಕಿಂತ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ವಾಕಿಂಗ್ ಪಾಥ್ ಸುತ್ತಲೂ ಅಳವಡಿಸಿರುವ ಕಲ್ಲು ಬೆಂಚುಗಳಲ್ಲಿ ಮದ್ಯದ ಬಾಟಲಿಗಳು ಕಾಣಸಿಗುತ್ತಿದ್ದು, ಮಹಿಳೆಯರು ವಾಕಿಂಗ್ ಮಾಡಲು ಅಂಜುವ ಪರಿಸ್ಥಿತಿ ಇದೆ. ಖಾಸಗಿ ವಾಹನಗಳು ನಿಲ್ಲಿಸಲು ಅವಕಾಶ ನೀಡಿದ್ದು, ನಗರಸಭೆ ಮತ್ತು ಆರ್‌ಟಿಒ ಇಲಾಖೆ ಮೌನಕ್ಕೆ ಶರಣಾಗಿರುವುದು ಏಕೆ?
ಒಬೇದುಲ್ಲ ಮಾಹಿತಿ ಹಕ್ಕು ಕಾರ್ಯಕರ್ತ, ಹುಣಸೂರು