ಮುನೇನಕೊಪ್ಪ ಬಿಜೆಪಿ ಬಿಡುವ ಸಾಧ್ಯತೆ ಕಡಿಮೆ

JOSHI NEW
Published on

ಹುಬ್ಬಳ್ಳಿ : ಕೆಲವರು ಅಧಿಕಾರಕ್ಕಾಗಿ ಪಕ್ಷಾಂತರ ಮಾಡುತ್ತಾರೆ. ಆದರೆ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಬಿಜೆಪಿ ಎಲ್ಲ ರೀತಿಯ ಸ್ಥಾನಮಾನ ಕೊಟ್ಟಿದೆ. ಹೀಗಾಗಿ, ಅವರು ಪಕ್ಷ ಬಿಟ್ಟು ಹೋಗುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಶಂಕರ ಪಾಟೀಲ ಮುನೇನಕೊಪ್ಪ ಅವರೊಂದಿಗೆ ಮಾತನಾಡಿದ್ದೇನೆ ಎಂದರು.

ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನದ ಬಗ್ಗೆ ಬಿಜೆಪಿಗೆ ಬದ್ಧತೆ ಇದೆ. ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಕಾಂಗ್ರೆಸ್​ಗೆ ಪಕ್ಷಾಂತರಗೊಂಡ ನಂತರ ಮೂಲತಃ ಅದೇ ಪಕ್ಷದವರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೆಲವರಿಗೆ ಚುನಾವಣೆ ಸಮೀಪಿಸಿದಾಗ ಮಹದಾಯಿ, ಮೇಕೆದಾಟು ನೆನಪಾಗುತ್ತದೆ. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಮೊದಲು ಮುಖ್ಯಮಂತ್ರಿ ಅವರು ವೈಲ್ಡ್​ಲೈಫ್ ಬೋರ್ಡ್​ನೊಂದಿಗೆ ಸಭೆ ನಡೆಸಿ, ಅನುಮತಿ ಪಡೆಯಬೇಕಿದೆ. ಆದರೆ, ಮುಖ್ಯಮಂತ್ರಿ ಅವರು ಇದುವರೆಗೆ ಯಾವುದೇ ರೀತಿಯ ಸಭೆ ನಡೆಸಿದ ಬಗ್ಗೆ ಮಾಹಿತಿ ಇಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net