ಮುನೇನಕೊಪ್ಪ ರಾಜಕೀಯ ಗೊಂದಲ ಅಂತ್ಯ

Shankar new
Published on

ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘರ್​ವಾಪಸಿಯಿಂದಾಗಿ ಮಾಜಿ ಸಚಿವ ಹಾಗೂ ನವಲಗುಂದ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ರಾಜಕೀಯ ಸ್ಥಿರತೆ ಕಾಯ್ದುಕೊಂಡಂತಾಗಿದೆ.

ಜಗದೀಶ ಶೆಟ್ಟರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಸಭೆ ಚುನಾವಣೆ ನಂತರ ಬಿಜೆಪಿ ಹಾಗೂ ರಾಜಕೀಯ ಚಟುವಟಿಕೆಯಿಂದ ಸಂಪೂರ್ಣ ದೂರ ಉಳಿದಿದ್ದರು. ಮುನೇನಕೊಪ್ಪ ಅವರ ಕುಟುಂಬದಲ್ಲಿ ನಡೆದ ಕೆಲ ಘಟನೆಗಳೂ ಇದಕ್ಕೆ ಅಲ್ಪಮಟ್ಟಿಗೆ ಕಾರಣವಾಗಿದ್ದವು.

ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಲಿಲ್ಲವೆಂದು ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿದ್ದರು. ಚುನಾವಣೆಯಲ್ಲಿ ಶೆಟ್ಟರ್ ಸೋತರು. ಬಿಜೆಪಿಯ ನವಲಗುಂದ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಸಹ ಗೆಲುವು ಕಾಣಲಿಲ್ಲ. ಅಂದಿನಿಂದ ಮುನೇನಕೊಪ್ಪ ಬಿಜೆಪಿಯ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಬಿಜೆಪಿಯಿಂದ ಜಗದೀಶ ಶೆಟ್ಟರ್ ಅವರಿಗೆ ಅನ್ಯಾಯವಾಗಿದೆ ಎಂಬ ಕೋಪವೂ ಮುನೇನಕೊಪ್ಪ ಅವರಲ್ಲಿ ಇತ್ತು. ಆದರೆ, ಬಹಿರಂಗವಾಗಿ ಶೆಟ್ಟರ್ ಅವರನ್ನು ಬೆಂಬಲಿಸುವ ಧೈರ್ಯವನ್ನೂ ಮುನೇನಕೊಪ್ಪ ಮಾಡಲಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಬಿಜೆಪಿಯಿಂದ ತಮ್ಮನ್ನೂ ಹೊರಹಾಕಿಯಾರು ಎಂಬ ಆತಂಕ ಅವರನ್ನು ಕಾಡಿದ್ದರಲ್ಲಿ ಸಂದೇಹವಿಲ್ಲ.

ಹಾಗಂತ, ಶೆಟ್ಟರ್ ಬೆಂಬಲಿಸಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೆ ಅಲ್ಲಿ ತಮಗೆ ಸೂಕ್ತ ಸ್ಥಾನಮಾನ ಸಿಕ್ಕಿತೇ ಎಂಬ ಸಂದೇಹ ಅವರನ್ನು ಕಾಡುತ್ತಿತ್ತು. ಇದೇ ಕಾರಣಕ್ಕೆ ತಕ್ಷಣ ಶೆಟ್ಟರ್ ಅವರನ್ನು ಬೆಂಬಲಿಸದೆ ಕಾದು ನೋಡುವ ತಂತ್ರವನ್ನು ಮುನೇನಕೊಪ್ಪ ಅನುಸರಿಸಿದ್ದರು.

ಜನವರಿ 31ರೊಳಗೆ ತಮ್ಮ ರಾಜಕೀಯ ಜೀವನದ ನಿರ್ಧಾರ ಬಹಿರಂಗಪಡಿಸುವುದಾಗಿ ಶಂಕರ ಪಾಟೀಲ ಮುನೇನಕೊಪ್ಪ ಹೇಳಿಕೊಂಡಿದ್ದರು. ಸಂಸದ ಪ್ರಲ್ಹಾದ ಜೋಶಿ ಅವರು ಇತ್ತೀಚೆಗೆ ತಮ್ಮ ಕ್ಷಮತಾ ಸೇವಾ ಸಂಸ್ಥೆಯಿಂದ ನವಲಗುಂದದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಿಂದಲೂ ಮುನೇನಕೊಪ್ಪ ಅಂತರ ಕಾಯ್ದುಕೊಂಡಿದ್ದರು. ಇದನ್ನೆಲ್ಲ ಗಮನಿಸಿದರೆ, ಮುನೇನಕೊಪ್ಪ ತಮ್ಮ ಆಪ್ತ ಜಗದೀಶ ಶೆಟ್ಟರ್ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಸೇರುವರೇನೋ ಎಂಬ ಮಾತುಗಳು ನವಲಗುಂದ ಕ್ಷೇತ್ರದಲ್ಲಿ ಕೇಳಿಬರುತ್ತಿದ್ದವು.

ಇದೆಲ್ಲದರ ಮಧ್ಯೆ ಕಳೆದ ನಾಲ್ಕು ದಿನಗಳ ಹಿಂದೆ ಜಗದೀಶ ಶೆಟ್ಟರ್ ಅವರು ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿ, ಅಲ್ಲಿಂದ ದೆಹಲಿಗೆ ಭೇಟಿ ನೀಡಿದ್ದಾರೆ. ಗುರುವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಬಿಜೆಪಿಗೆ ವಾಪಸ್ಸಾಗಿದ್ದಾರೆ.

ಜಗದೀಶ ಶೆಟ್ಟರ್ ಬಿಜೆಪಿಗೆ ವಾಪಸ್ಸಾಗುತ್ತಿದ್ದಂತೆಯೇ ಶಂಕರ ಪಾಟೀಲ ಮುನೇನಕೊಪ್ಪ ಅವರ ರಾಜಕೀಯ ಗೊಂದಲಗಳೂ ನಿವಾರಣೆಯಾದಂತಾಗಿವೆ. ಶಂಕರ ಪಾಟೀಲ ಮುನೇನಕೊಪ್ಪ ಮತ್ತೆ ಬಿಜೆಪಿಯಲ್ಲಿ ಸಕ್ರಿಯಗೊಳ್ಳಲಿದ್ದಾರೆ.

**

ಜಗದೀಶ ಶೆಟ್ಟರ್ ಮರಳಿ ಬಿಜೆಪಿಗೆ ಬರುವ ಮೂಲಕ ರಾಜಕೀಯ ಗೊಂದಲಗಳಿಗೆ ತೆರೆ ಬಿದ್ದಿದೆ. ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಈ ಬಗ್ಗೆ ಎರಡು ದಿನದಲ್ಲಿ ಮಾಧ್ಯಮಗಳ ಮೂಲಕ ಎಲ್ಲವನ್ನೂ ಸ್ಪಷ್ಟಗೊಳಿಸುತ್ತೇನೆ.

| ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net