

ಮುಂಡರಗಿ: ಕಲಬುರ್ಗಿಯಲ್ಲಿ ಈ ಹಿಂದೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜರುಗಿದ್ದ ಸಚಿವ ಸಂಪುಟ ಸಭೆಯಲ್ಲಿ ಸಿಂಗಟಾಲೂರ ಏತ ನೀರಾವರಿ ಯೋಜನೆಗೆ 5,600 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಈಗ ಮತ್ತೆ ನಮ್ಮ ಅವಧಿಯಲ್ಲಿ ಸಿಂಗಟಾಲೂರ ನೀರಾವರಿ ಯೋಜನೆಗೆ ಹೆಚ್ಚು ಅನುದಾನ ನೀಡಿ ಪೂರ್ಣಪ್ರಮಾಣದ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಯತ್ನಿಸಲಾಗುವುದು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಪಟ್ಟಣದಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜ ಸೇವಾ ಸಂಸ್ಥೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ತ್ಯಾಗವೀರ ಸಿರಸಂಗಿ ಶ್ರೀ ಲಿಂಗರಾಜರ 118ನೇ ಸ್ಮರಣೋತ್ಸವ ಹಾಗೂ ಲಿಂಗರಾಜ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ-ಲಿಂಗಾಯತ ಸಮುದಾಯದ ಉಪಪಂಗಡಗಳೆಲ್ಲ ಒಂದಾಗಲಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದಾಗಲಿ ಎನ್ನುವ ಆಶಯದೊಂದಿಗೆ ಹಾನಗಲ್ಲ ಶ್ರೀ ಗುರು ಕುಮಾರೇಶ್ವರರ ನೇತೃತ್ವದಲ್ಲಿ ಸಿರಸಂಗಿ ಲಿಂಗರಾಜರು ಹಾಗೂ ಅರಟಾಳು ರುದ್ರಗೌಡರು ವೀರಶೈವ ಮಹಾಸಭೆ ಸ್ಥಾಪಿಸಿದರು. ಸಿರಸಂಗಿ ಲಿಂಗರಾಜರು ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಲಿ ಎಂಬ ಉದ್ದೇಶದಿಂದ ಜನರು ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದ ಬಹುಮತ ನೀಡಿದ್ದಾರೆ. ಎಲ್ಲರೂ ಹೊಂದಿಕೊಂಡು ಉತ್ತಮ ಆಡಳಿತ ನೀಡಬೇಕು ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು ಜಿಲ್ಲೆಯ ಹಲವು ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸುವ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದರು.
ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಸಿರಸಂಗಿ ಲಿಂಗರಾಜರ ತ್ಯಾಗದ ಸ್ಮರಣೆ ಅಗತ್ಯವಿದೆ. ರಾಜ್ಯದೆಲ್ಲೆಡೆ ಅವರನ್ನು ಸ್ಮರಿಸುವ ಕೆಲಸ ಆಗಬೇಕು ಎಂದರು.
ಅದಕ್ಕೂ ಪೂರ್ವದಲ್ಲಿ ಲಿಂಗರಾಜ ಸಮುದಾಯ ಭವನ, ಲಿಂಗರಾಜ ಮೂರ್ತಿ ಲೋಕಾರ್ಪಣೆಗೊಳಿಸಲಾಯಿತು. ಲಿಂಗರಾಜ ಪಥ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಕಟ್ಟಡ ವಿನ್ಯಾಸಕ ಶಶಿಧರ ಚವಡಿ, ಪುರಸಭೆ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಗೌರವಾಧ್ಯಕ್ಷ ಈರಪ್ಪ ಬಿಸನಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಬಿ.ಬಿ. ಪಾಟೀಲ, ರವೀಂದ್ರ ಕುಡವಕ್ಕಲಿಗೇರ, ಶಿವಕುಮಾರ ಪಾಟೀಲ, ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಬಿ.ಸಿ. ನಾಡಗೌಡ್ರ, ನವೀನ ಗುಳಗಣ್ಣವರ, ಕೆ.ಎನ್. ಸ್ವಾಮಿ, ಕೆಂಚಪ್ಪ ನಾಡಗೌಡ್ರ, ಬಸವರಾಜ ಸಂಗನಾಳ, ಪ್ರಭು ಬೋಳಗೊಂಡನವರ, ಶರಣಪ್ಪ ಶುರುಂದ, ಡಾ.ಪಿ.ಬಿ. ಹಿರೇಮಠ, ಮುತ್ತಣ್ಣ ರೋಣದ, ಗುದ್ನೆಪ್ಪ ಹಳೇಮನಿ, ಮಹೇಶ ಹೊಳೆಯಣ್ಣವರ ಇದ್ದರು. ಎ. ಮಂಜುನಾಥ, ಎಂ.ಜಿ. ಗಚ್ಚಣ್ಣವರ ಹಾಗೂ ವಕೀಲ ಶಿವು ನಾಡಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.