ಖಾಸಗಿ ಕಂಪನಿಯಿಂದ ಪರಿಹಾರ ವಿತರಣೆ

8-mdg parihar
Published on

ಮುಂಡರಗಿ: ಖಾಸಗಿ ಕಂಪನಿಯೊಂದರ ಸೂರ್ಯಕಾಂತಿ ಬಿತ್ತನೆ ಬೀಜ ಕಳಪೆಯಾಗಿದ್ದರಿಂದ ಬೆಳೆ ಹಾನಿಯಾದ ಕಾರಣ ಕಂಪನಿಯ ವ್ಯವಸ್ಥಾಪಕ ಸುಚಿತ್ ಅವರು ಗದಗ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಅವರ ಸಮ್ಮುಖದಲ್ಲಿ ಬೆಳೆಹಾನಿ ಅನುಭವಿಸಿದ ಕೆಲ ರೈತರಿಗೆ ಮಂಗಳವಾರ ಪ್ರತಿ ಪ್ಯಾಕೆಟ್ ಸೂರ್ಯಕಾಂತಿ ಬೀಜಕ್ಕೆ 5 ಸಾವಿರ ರೂ. ಪರಿಹಾರ ಚೆಕ್ ವಿತರಿಸಿದರು.
ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಮಾತನಾಡಿ, ಖಾಸಗಿ ಕಂಪನಿ ಕಳಪೆ ಬೀಜದಿಂದ ಬೆಳೆ ಹಾನಿಯಾದ ಹಿನ್ನೆಲೆ ಒಂದು ತಿಂಗಳಿಂದ ಹೋರಾಟ ಮಾಡಲಾಗಿತ್ತು. ಕಂಪನಿಯವರು ನೀಡಿದ ಭರವಸೆಯಂತೆ ಈಗ ಪರಿಹಾರ ನೀಡಲಾಗುತ್ತಿದೆ. ತಾಲೂಕಿನಲ್ಲಿ ಅಂದಾಜು 6,500 ಪ್ಯಾಕೆಟ್‌ಗೆ 3.5 ಕೋಟಿ ರೂ. ಪರಿಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯೊಬ್ಬರ ಸಹಕಾರವೇ ಕಾರಣ ಎಂದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ಈಗ ಹೋರಾಟಕ್ಕೆ ಪ್ರತಿಫಲ ದೊರತಿದೆ. ರೈತರಿಗೆ ಗೊಂದಲವಾಗದೆ ಪರಿಹಾರ ವಿತರಿಸುವ ಕೆಲಸವಾಗಲಿ ಎಂದರು. ಖಾಸಗಿ ಕಂಪನಿ ವ್ಯವಸ್ಥಾಪಕ ಸುಚಿತ್ ಮಾತನಾಡಿ, ಬೀಜ ಖರೀದಿಸಿದ ರಸೀದಿ ಆಧಾರದ ಮೇಲೆ ಪ್ರತಿ ಪ್ಯಾಕೆಟ್‌ಗೆ 5 ಸಾವಿರ ರೂ.ಪರಿಹಾರ ಚೆಕ್ ನೀಡಲಾಗುತ್ತಿದೆ. ಆ. 8ರಂದು 70 ರೈತರಿಗೆ ಪರಿಹಾರ ಚೆಕ್ ನೀಡಲಾಯಿತು. ಇನ್ನುಳಿದ ರೈತರಿಗೆ ಪರಿಹಾರ ಚೆಕ್ ನೀಡಲಾಗುವುದು ಎಂದರು. ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶಮೂರ್ತಿ, ಸಿಪಿಐ ವೀರಣ್ಣ ಹಳ್ಳಿ, ರೈತರಾದ ಪ್ರಕಾಶ ಸಜ್ಜನರ, ಎಚ್.ಬಿ. ಕುರಿ, ಶರಣಪ್ಪ ಕಂಬಳಿ, ದಶರಥ ಕುರಿ, ರಾಘು ಕುರಿ, ಮುತ್ತು ಬಳ್ಳಾರಿ, ದೇವಪ್ಪ ಡೊಣ್ಣಿ, ಈರಣ್ಣ ಶೀರಿ, ದುರುಗಪ್ಪ ಚಿಕ್ಕಣ್ಣವರ, ಮಂಜಪ್ಪ ಹುಯಿಲಗೋಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net