

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಆವರಣದಲ್ಲಿ ಜೂ. 21ರಂದು ಬೆಳಗ್ಗೆ 6 ಗಂಟೆಗೆ ತಾಲೂಕು ಆಡಳಿತ, ತಾ.ಪಂ., ಪುರಸಭೆ, ಪತಂಜಲಿ ಯೋಗ ಸಮಿತಿ, ಜಗದ್ಗುರ ಅನ್ನದಾನೀಶ್ವರ ವಿದ್ಯಾ ಸಮಿತಿ, ಹಿಮಾಲಯ ಯೋಗ ಕೇಂದ್ರ, ಅನ್ಮೋಲ್ ಯೋಗ ಕೇಂದ್ರ ಮೊದಲಾದ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಏರ್ಪಡಿಸಲಾಗಿದೆ ಎಂದು ಆಯುರ್ವೇದ ವೈದ್ಯ ಪಿ.ಬಿ. ಹಿರೇಗೌಡ್ರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗ ದಿನಾಚರಣೆ ಪ್ರಯುಕ್ತ ಜೂ. 19ರಂದು ಬೆಳಗ್ಗೆ 10 ಗಂಟೆಗೆ ಜಗದ್ಗುರು ಅನ್ನದಾನೀಶ್ವರ ಮಠದಿಂದ ಪ್ರಮುಖ ಬೀದಿಗಳಲ್ಲಿ ಯೋಗ ಕುರಿತು ಜಾಗೃತಿ ಜಾಥಾ ನಡೆಸಲಾಗುವುದು. ವಿವಿಧ ಸಂಘ, ಸಂಸ್ಥೆ ಸದಸ್ಯರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವರು. ಜಾಥಾಕ್ಕೆ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಚಾಲನೆ ನೀಡುವರು ಎಂದರು.
ಹಿಮಾಲಯ ಯೋಗ ಕೇಂದ್ರ ಸಂಚಾಲಕಿ ಮಂಜುಳಾ ಇಟಗಿ ಮಾತನಾಡಿ, ಜೂ. 21ರಂದು ಬೆಳಗ್ಗೆ 6 ಗಂಟೆಗೆ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಉದ್ಘಾಟಿಸುವರು. ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ತಹಸೀಲ್ದಾರ್ ಧನಂಜಯ ಎಂ., ತಾ.ಪಂ.ಇಒ ವಿಶ್ವನಾಥ ಹೊಸಮನಿ, ಬಿಇಒ ಎಚ್.ಎಂ.ಫಡ್ನೇಶಿ, ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಇತರರು ಪಾಲ್ಗೊಳ್ಳಲಿದ್ದಾರೆ. 7 ಗಂಟೆಗೆ ಸಾಮೂಹಿಕ ಯೋಗಾಸನ ಕಾರ್ಯಕ್ರಮ ನಡೆಯಲಿದೆ ಎಂದರು.
ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ ಮಾತನಾಡಿ, ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜನರು ಉತ್ತಮ ಆರೋಗ್ಯ ದೃಷ್ಟಿಯಿಂದ ಯೋಗ್ಯಾಸದಲ್ಲಿ ತೊಡಗಬೇಕು. ಈ ಮೂಲಕ ಸುಂದರ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಬಸವಣ್ಣೆಪ್ಪ, ಮಂಜುನಾಥ ಅಳವಂಡಿ, ಬಿ.ಆರ್. ಕುಲಕರ್ಣಿ, ನೀತಾ ಕಂಚಗಾರ, ಕಾಶೀನಾಥ ಶಿರಬಡಗಿ, ಡಾ. ಸಚಿನ್ ಉಪ್ಪಾರ, ಜಗದೀಶ ಸೋನಿ, ನಾರಾಯಣಪ್ಪ ಗುಬ್ಬಿ ಇತರರು ಇದ್ದರು.