ಮುಂಡರಗಿ ತಾಲೂಕು ಬರಪೀಡಿತ ಘೋಷಿಸಲು ಸರ್ಕಾರಕ್ಕೆ 8 ದಿನ ಗಡುವು

25 MDG 1
Published on

ಮುಂಡರಗಿ: ಮುಂಡರಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ಸೋಮವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಮುಂಡರಗಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು. ಅಂಗಡಿ, ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದಾಗಿದ್ದವು. ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು.

ವಿವಿಧ ಪ್ರಗತಿಪರ, ರೈತಪರ, ಕಾರ್ಮಿಕ ಸಂಘಟನೆ, ಕನ್ನಡಪರ ಹಾಗೂ ಸಂಘ, ಸಂಸ್ಥೆಗಳ ನೇತೃತ್ವದಲ್ಲಿ ಮುಂಡರಗಿ ಬಂದ್ ಕರೆ ನೀಡಲಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಬಂದಾಗಿತ್ತು. ಜನ ಜಂಗುಳಿಯಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ, ಮುಖ್ಯಬಜಾರ್ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಶಾಲಾ, ಕಾಲೇಜ್ ಹಾಗೂ ಬೇರೆಡೆ ತೆರಳಲು ಆಗಮಿಸಿದ್ದ ಜನರು ಬಸ್‌ಗಳಿಲ್ಲದೆ ಪರದಾಡಿದರು. ಕೆಲವೊಂದು ಖಾಸಗಿ ವಾಹನಗಳ ಮೂಲಕ ಊರಿಗೆ ತೆರಳಿದರು. ಇನ್ನೂ ಕೆಲ ಪ್ರಯಾಣಿಕರು ತಮ್ಮ ಮನೆಗೆ ಹಿಂದುರುಗಿದರು. ಎರಡ್ಮೂರು ತಾಸು ವಿದ್ಯುತ್ ಸಂಪರ್ಕ ಕಡಿತವಾಗಿತ್ತು.

ಬಂದ್‌ನಿಂದಾಗಿ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಲ್ಲದೆ ಖಾಲಿಯಾಗಿದ್ದವು. ಪದವಿ ಕಾಲೇಜ್‌ನಲ್ಲಿ ಪರೀಕ್ಷೆ ಇದ್ದ ಕಾರಣ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು. ಆಸ್ಪತ್ರೆ, ಔಷಧ ಹಾಗೂ ತುರ್ತು ಸೇವೆ ಅಬಾಧಿತವಾಗಿತ್ತು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಪ್ರತಿಭಟನಾ ರ‌್ಯಾಲಿಗೆ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನೀಡಿದರು. ಎತ್ತಿನ ಬಂಡಿಗಳೊಂದಿಗೆ ಹೊರಟ ಪ್ರತಿಭಟನಾಕಾರರು ತಾಲೂಕನ್ನು ಬರ ಪೀಡಿತವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು. ಹಲವರು ರಸ್ತೆ ಮೇಲೆ ಉರುಳಿದರು. ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿಗೆ ತೆರಳಿ ಎತ್ತುಗಳನ್ನು ಕಚೇರಿ ಆವರಣದಲ್ಲಿ ಕಟ್ಟಿಹಾಕಿದರು. ಕಚೇರಿ ಮುಖ್ಯಗೇಟ್ ಬಂದ್ ಮಾಡಿ ಧಿಕ್ಕಾರ ಕೂಗಿದರು.

ರಾಜ್ಯ ಸರ್ಕಾರ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಜಿಲ್ಲೆಯ ಗದಗ, ರೋಣ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡ ತಾಲೂಕಗಳನ್ನು ಬರ ಪೀಡಿತವೆಂದು ಘೋಷಿಸಿ, ಮುಂಡರಗಿ ತಾಲೂಕು ಮಾತ್ರ ಕೈಬಿಡಲಾಗಿದೆ. 40-50 ವರ್ಷಗಳಿಂದ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕೆಂದು ಗುರುತಿಸಲ್ಪಟ್ಟಿದೆ. ಹೀಗಿದ್ದರೂ ಮುಂಡರಗಿ ತಾಲೂಕು ಅನೇಕ ಯೋಜನೆಗಳಿಂದ ವಂಚಿತವಾಗುತ್ತಿದೆ. ಆದ್ದರಿಂದ ಮುಂಡರಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಅಪಾರ ಜಿಲ್ಲಾಧಿಕಾರಿ ಅನ್ನಪೂರ್ಣಾ, ತಹಸೀಲ್ದಾರ್ ಧನಂಜಯ್ ಎಂ. ಮತ್ತಿತರರ ಅಧಿಕಾರಿಗಳು ಭೇಟಿ ನೀಡಿದರು. ಶಾಸಕ ಡಾ. ಚಂದ್ರು ಅವರು, ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಎರಡು ದಿನದಲ್ಲಿ ಜಿಲ್ಲಾಡಳಿತ ಕಚೇರಿಯಲ್ಲಿ ಸಭೆ ನಡೆಸಿ ಮುಂಡರಗಿ ತಾಲೂಕು ಬರಪೀಡಿತ ಎಂದು ಘೋಷಿಸಲು ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸಿ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನೆಕಾರರು, ಇನ್ನು 8 ದಿನದಲ್ಲಿ ಘೋಷಿಸಬೇಕು. ಇಲ್ಲದಿದ್ದರೆ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷಗಳನ್ನು ಚರ್ಚಿಸಿ ತೀವ್ರಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಎಡಿಸಿ ಅನ್ನಪೂರ್ಣಾ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net