

ಮುಂಡರಗಿ: ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಬಹಿಷ್ಕರಿಸಲಾಗುವುದು ಎಂದು ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಸದಸ್ಯರು ಬಿಇಒ ಕಚೇರಿಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸೆ. 5ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಆದರೆ, ಪ್ರಾಥಮಿಕ ಶಾಲಾ ಶಿಕ್ಷಕರೆಂದು 2016ಕ್ಕಿಂತ ಮುಂಚೆ ನೇಮಕವಾದ ಶಿಕ್ಷಕರು 1ರಿಂದ 7,8ನೇ ತರಗತಿಗೆ ಬೋಧನೆಗೆ ನೇಮಕವಾಗಿದ್ದರೂ ಅವರಿಗೆ ಪಿಎಸ್ಟಿ ಎಂಬ ಪದನಾಮ ಸೃಷ್ಟಿಸಿ 1ರಿಂದ 5ನೇ ತರಗತಿಗೆ ಹಿಂದೂಡಲಾಗಿದೆ. ಮುಖ್ಯಶಿಕ್ಷಕರ ಬಡ್ತಿ ಮತ್ತು ಪ್ರೌಢಶಾಲೆಗೆ ಪದೋನ್ನತಿ ನೀಡುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಈ ಹಿಂದೆ ಬೆಂಗಳೂರಿನಲ್ಲಿ ಶಿಕ್ಷಕರು ಹೋರಾಟ ನಡೆಸೊದ್ದರು. ಆಗ ಸಿಎಂ ಮತ್ತು ಶಿಕ್ಷಣ ಸಚಿವರು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಸರ್ಕಾರ, ಇಲಾಖೆಯಿಂದಾಗಲಿ ಯಾವುದೇ ಸಮಸ್ಯೆ ನಿವಾರಣೆಯಾಗಿಲ್ಲ. ಆದ್ದರಿಂದ ಶಿಕ್ಷಕರ ದಿನಾಚರಣೆ ದಿನ ಶಾಲೆಯಲ್ಲಿ ಕಪ್ಪುಪಟ್ಟಿ ಧರಿಸಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಆಚರಿಸಿ, ಶಾಲಾ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಿಇಒ ಪರವಾಗಿ ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಮನವಿ ಸ್ವೀಕರಿಸಿದರು. ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಕೆ. ಹಲವಾಗಲಿ, ಸಹಕಾರ್ಯದರ್ಶಿ ಬಿ.ಡಿ. ಬುಡೇನೈಕರ್, ಸಂಘಟನಾ ಕಾರ್ಯದರ್ಶಿ ಎ.ಬಿ. ಡೊಳ್ಳಿನ, ತಾಲೂಕಾಧ್ಯಕ್ಷ ಡಾ. ಕೊಟ್ಟೂರಯ್ಯ ಕೆ., ಪ್ರ. ಕಾರ್ಯದರ್ಶಿ ಕೆ.ಟಿ. ತಳವಾರ, ಎಚ್.ಎನ್. ಚಿಂಚಲಿ, ಪಿ.ಎಂ. ಲಾಂಡೆ, ಎನ್.ಆರ್. ಕಣವಿ, ವಿ.ಎಸ್. ಹುಳ್ಳಿ, ಗಿರಿಜಾ ಇಟಗಿ, ಆರ್.ಎಸ್. ಹವಳೆ ಇತರರು ಇದ್ದರು.