ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಶ್ರಮಿಸಿ

10-MDG-3 GS PATIL
Published on

ಮುಂಡರಗಿ: ಗುರುಗಳಿಗೆ ಸಮಾಜದಲ್ಲಿ ತುಂಬಾ ಗೌರವವಿದೆ. ಉತ್ತಮ ನಾಗರಿಕರನ್ನು, ಸಮಾಜ ಸೇವಕರನ್ನು ಬೆಳೆಸುವಂತಹ, ಗುರುತಿಸುವಂತಹ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಪುರಸಭೆ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ಶಿಕ್ಷಣ ನೀತಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಹಲವು ತೊಡಕುಗಳಿವೆ. ಅದಕ್ಕೆ ಪೂರಕ ವ್ಯವಸ್ಥೆ ಪರಿಪೂರ್ಣವಾಗಿ ಕಂಡುಕೊಳ್ಳಲಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ನೂತನ ಶಿಕ್ಷಣ ನೀತಿ ಜಾರಿಗೊಳಿಸುವ ಕುರಿತು ಪರಿಶೀಲಿಸುತ್ತಿದೆ. ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಶಿಕ್ಷಕರಲ್ಲಿ ಶಿಸ್ತು, ಕ್ಷಮಾ ಗುಣ, ಕರ್ತವ್ಯನಿಷ್ಠೆ ಇರಬೇಕು ಎಂದರು. ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಜೀವನದ ಯಶಸ್ಸಿಗೆ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಸರ್ಕಾರದ ಆದೇಶ ಪಾಲಿಸಿ ವಿದ್ಯೆದಾನ ಮಾಡುತ್ತಾರೆ. ಶಾಲೆಗಳಲ್ಲಿ ರಾಜಕೀಯ ಮಾಡಬಾರದು. ಶಾಲಾ ಸುಧಾರಣೆಗೆ ಶಿಕ್ಷಕರು ಮುತುವರ್ಜಿ ವಹಿಸಬೇಕು ಎಂದರು.
ಡಿಡಿಪಿಐ ಎಂ.ಎ. ರಡ್ಡೇರ, ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ನಿರ್ದೇಶಕ ಶಿವಾನಂದ ಹೊಂಬಳ ಮಾತನಾಡಿದರು. ನಿವೃತ್ತ ಶಿಕ್ಷಕರಿಗೆ ಹಾಗೂ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಧನಂಜಯ ಎಂ., ತಾ.ಪಂ. ಇಒ ವಿಶ್ವನಾಥ ಹೊಸಮನಿ, ಹೇಮಗಿರೀಶ ಹಾವಿನಾಳ, ಡಿ.ಡಿ. ಮೋರಮಾಳ, ಲಿಂಗರಾಜಗೌಡ ಪಾಟೀಲ, ಹೇಮಂತಗೌಡ ಪಾಟೀಲ, ಗೋಣಿಬಸಪ್ಪ ಕೊರ್ಲಹಳ್ಳಿ, ರುದ್ರಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ನಾಗರಾಜ ಹೊಂಬಳಗಟ್ಟಿ, ಜ್ಯೋತಿ ಹಾನಗಲ್ಲ, ರಾಜಾಭಕ್ಷಿ ಬೆಟಗೇರಿ, ನಾಗರಾಜ ಹಳ್ಳಿಕೇರಿ, ಶಿವಕುಮಾರ ಸಜ್ಜನರ, ಬಿಇಒ ಗಂಗಾಧರ ಅಣ್ಣಿಗೇರಿ, ಹನುಮರಡ್ಡಿ ಇಟಗಿ, ಚಿದಾನಂದ ವಡ್ಡರ, ಎಸ್.ಡಿ. ಬಸ್ಸೇಗೌಡ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net