ಸಿಂಗಟಾಲೂರು ಬ್ಯಾರೇಜ್‌ನಿಂದ ಕಾಲುವೆಗೆ ನೀರು ಹರಿಸಿ

30-mdg desayi
Published on

ಮುಂಡರಗಿ: ತಾಲೂಕಿನ ಸಿಂಗಟಾಲೂರು ಬ್ಯಾರೇಜ್‌ನಿಂದ ಯಾವುದೇ ಮುನ್ಸೂಚನೆ ನೀಡದೆ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ. ಕಾಲುವೆ ನೀರನ್ನು ನಂಬಿಕೊಂಡು ಬೀಜ ಬಿತ್ತನೆ ಮಾಡಿದ ರೈತರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ನವೆಂಬರ್ ಕೊನೆವರೆಗೆ ಕಾಲುವೆಗೆ ನೀರು ಹರಿಸಬೇಕು ಎಂದು ಕಲಕೇರಿ ಗ್ರಾಮದ ರೈತ, ನಿವೃತ್ತ ಉಪ ತಹಸೀಲ್ದಾರ್ ಕೆ.ಎ. ದೇಸಾಯಿ ಒತ್ತಾಯಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವ ಬಗ್ಗೆ ಮೊದಲು ರೈತರಿಗೆ ಮಾಹಿತಿ ನೀಡಬೇಕಿತ್ತು. ಯಾವುದೆ ಮಾಹಿತಿ ನೀಡದೆ ಏಕಾಏಕಿಯಾಗಿ ಅ. 28ರಿಂದ ಕಾಲುವೆ ಲಿಫ್ಟ್‌ಗಳನ್ನು ಸ್ಥಗಿತಗೊಳಿಸಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಕಾಲುವೆ ಭಾಗದ ರೈತರು ಭತ್ತ, ಕಬ್ಬು, ಗೋವಿನಜೋಳ, ಹತ್ತಿ, ಕಡಲೆ ಸೇರಿ ವಿವಿಧ ಬೆಳೆ ಬೆಳೆದಿದ್ದಾರೆ. ಅವುಗಳಿಗೆ ಇನ್ನೂ ಒಂದು ತಿಂಗಳವರೆಗೆ ನೀರಿನ ಅವಶ್ಯಕತೆ ಇದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಬ್ಯಾರೇಜ್‌ಗೆ ಭೇಟಿ ನೀಡಿ ಪರಿಶೀಲಿಸಬೇಕು. ನವೆಂಬರ್ ಕೊನೆವರೆಗೂ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಜಮೀನುಗಳಿಗೆ ನೀರು ಹರಿಸುವ ಉದ್ದೇಶದಿಂದ ಆರಂಭಗೊಂಡಿರುವ ಯೋಜನೆಯು ಈಗ ಉಪಯೋಗವಿಲ್ಲದಾದರೆ ಹೇಗೆ?. ಕುಡಿಯುವ ನೀರಿನ ಶೇಖರಣೆ ಉದ್ದೇಶ ಹೇಳಿ ಕಾಲುವೆಗೆ ನೀರು ಹರಿಸುವುದನ್ನು ಬಂದ್ ಮಾಡಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net