ರೈತರು ಬೆಳೆ ವೈವಿಧ್ಯತೆ ರೂಢಿಸಿಕೊಳ್ಳಲಿ

29-MDG-2 BEEJA.........
Published on

ಮುಂಡರಗಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ರೈತರ ವಾಸ್ತವಿಕ ಹಿಡುವಳಿ ಅಥವಾ ಗರಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಎಲ್ಲ ಬಿತ್ತನೆ ಬೀಜಗಳಿಗೆ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹೇಳಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ 2024-25ನೇ ಸಾಲಿನ ಹಿಂಗಾರು ಹಂಗಾಮಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಥಳೀಯ ರೈತ ಸಂಪರ್ಕ ಕೆಂದ್ರದಲ್ಲಿ 300 ಕ್ವಿಂಟಾಲ್ ಕಡಲೆ, 30 ಕ್ವಿಂ. ಜೋಳ, 20 ಕ್ವಿಂಟಾಲ್ ಗೋಧಿ ದಾಸ್ತಾನು ಮಾಡಲಾಗಿರುತ್ತದೆ. ಒಬ್ಬ ರೈತರಿಗೆ ಒಂದು ಬೆಳೆಯ ಮೂರು ಎಕರೆ ವಿಸ್ತೀರ್ಣಕ್ಕೆ ಮಾತ್ರ ಬಿತ್ತನೆ ಬೀಜ ನೀಡಲಾಗುವುದು. ಇನ್ನು ಎರಡು ಎಕರೆ ಜಮೀನಿಗೆ ಅನ್ಯ ಬೆಳೆಯ ಬೀಜವನ್ನು ಪಡೆಯಬಹುದಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆ ವೈವಿಧ್ಯತೆಯನ್ನು ರೂಢಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಸರ್ಕಾರ ಈ ನಿಯಮ ರೂಪಿಸಿದೆ. ಪ್ರಮಾಣಿತ ಬೀಜ ಒಂದು ಬಾರಿ ಪಡೆದ ರೈತನಿಗೆ ಮುಂದಿನ ಮೂರು ವರ್ಷ ಅದೇ ಬೆಳೆಯ ಬಿತ್ತನೆ ಬೀಜವನ್ನು ನೀಡಲು ನಿಯಮಾವಳಿಯಲ್ಲಿ ಅವಕಾಶ ಇರುವುದಿಲ್ಲ ಎಂದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರೇಶ ಎಸ್., ಸಹಾಯಕ ಕೃಷಿ ಅಧಿಕಾರಿ ನಿಂಗಪ್ಪ ಬಿ., ಆತ್ಮ ಯೋಜನೆಯ ಸಂಯೋಜಕ ಗೌರಿಶಂಕರ ಸಜ್ಜನರ, ರೈತರಾದ ಚಂದ್ರಪ್ಪ ಕುರಿ, ಸಣ್ಣಬಸಪ್ಪ ಜಳಕಿ, ಚಂದ್ರಶೇಖರಪ್ಪ ಗೊಬ್ಬರಗುಂಪಿ, ಮಂಜುನಾಥ ಗೌಡರ, ಭೀಮಣ್ಣ ಸುಗ್ನಳ್ಳಿ, ಬಾಬುಜಿ ಹಡಪದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net