

ಮುಂಡರಗಿ: ಮಕ್ಕಳಲ್ಲಿ ದೇಶಭಕ್ತಿ, ಶಿಸ್ತು, ಸಂಯಮ, ಸೇವೆ, ತ್ಯಾಗ ಮತ್ತು ಸಾಮಾಜಿಕ ಕಳಕಳಿ ಬಗ್ಗೆ ತಿಳಿಸಿ ಕೊಡುವ ಕಾರ್ಯವನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಹಾಗೂ ಭಾರತ ಸೇವಾದಳ ಘಟಕಗಳು ಮಾಡುತ್ತಿವೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಇಟಗಿ ಹೇಳಿದರು.
ಪಟ್ಟಣದ ವಿ.ಜಿ. ಲಿಂಬಿಕಾಯಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಹಾಗೂ ಭಾರತ ಸೇವಾದಳ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಶಾಲಾ ಹಂತದಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಅವರಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡುತ್ತವೆ ಎಂದರು.
ತಾಲೂಕು ಭಾರತ ಸೇವಾದಳ ಅಧೀಕ್ಷಕ ವೈ.ಎಚ್. ಬಚನಹಳ್ಳಿ ಮಾತನಾಡಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಹಾಗೂ ಭಾರತ ಸೇವಾದಳ ಘಟಕಗಳ ಕಾರ್ಯ ಬೇರೆ-ಬೇರೆಯಾದರೂ ಉದ್ದೇಶ ಒಂದೇ ಆಗಿದೆ. ಮಕ್ಕಳಲ್ಲಿ ಸೃಜನಶೀಲ ಹಾಗೂ ಸಾಹಸ ಪ್ರವೃತ್ತಿ ಮನೋಭಾವ ಬೆಳೆಸಿ ದೇಶ ಸೇವೆಗೆ ಅಣಿಯಾಗುವ ಗುಣ ಬೆಳೆಸುತ್ತವೆ ಎಂದರು.
ರೋಟರಿ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಕೊಟ್ರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಯೋಜಕ ಶಿವಕುಮಾರ, ಎಂ.ಪಿ. ಶೀರನಹಳ್ಳಿ, ಜಗದೀಶ ಗುಳಾರಿ, ಎನ್.ಎನ್. ಕಲಕೇರಿ, ಎಸ್.ಎಸ್. ಬೆಟಗೇರಿ, ಶಿಕ್ಷಕಿ ವೈ.ಎಚ್.ವಾಲಿಕಾರ, ಎಸ್.ಬಿ. ಗದಗ, ಡಿ.ಎಸ್. ಲಮಾಣಿ, ಶಿಕ್ಷಕರು ಇದ್ದರು. ಮುಖ್ಯಶಿಕ್ಷಕ ಸಿ.ವಿ. ಪಾಟೀಲ ಹಾಗೂ ಮುತ್ತು ನಾಗರಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.