ನೀತಿ-ನಿಯಮಗಳಿಗೆ ಪ್ರಾಮುಖ್ಯತೆ ನೀಡಿ

11-MDG-1 KRIDAKUT
Published on

ಮುಂಡರಗಿ: ಜ್ಞಾನವು ಮನಸ್ಸಿಗೆ ಆಹಾರವಾದರೆ ಕ್ರೀಡೆಗಳು ಶರೀರಕ್ಕೆ ಆಹಾರವಿದ್ದಂತೆ. ಕ್ರೀಡೆಗಳಲ್ಲಿ ಭಾಗವಹಿಸಿದಾಗ ನೀತಿ-ನಿಯಮಗಳಿಗೆ ಪ್ರಾಮುಖ್ಯತೆ ನೀಡಬೇಕು. ಕ್ರೀಡೆಗಳಿಂದ ಮಾನಸಿಕ ಹಾಗೂ ದೇಹ ಸದೃಢತೆಗೆ ಸಹಕಾರಿಯಾಗುತ್ತದೆ ಎಂದು ಬಿಇಒ ಗಂಗಾಧರ ಅಣ್ಣಿಗೇರಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ಯಕ್ಲಾಸಪುರ ಗ್ರಾಮದ ಪಾರ್ವತೆವ್ವ ಹಿರೇಬಸಪ್ಪ ಹಳೇಮನಿ ಸರ್ಕಾರಿ ಪ್ರೌಢಶಾಲೆಯ ಆತಿಥ್ಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪೇಠಾಲೂರ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವಣ್ಣೆಪ್ಪ ಮಾತನಾಡಿ, ಯುವಪೀಳಿಗೆ ಅಭ್ಯಾಸದ ಜತೆಗೆ ಕ್ರೀಡಾಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮಿದುಳು ಅಭಿವೃದ್ಧಿಗೊಳ್ಳುತ್ತದೆ. ಕ್ರೀಡೆ ಜೀವನವನ್ನು ಯಶಸ್ವಿಗೊಳಿಸಲು ಸಹಾಯ ಮಾಡುತ್ತದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ನಾಗರಾಜ ಹಳ್ಳಿಕೇರಿ, ಯಕ್ಲಾಸಪುರ ಗ್ರಾಮದ ಶರಣಯ್ಯ ಹಿರೇಮಠ, ತಾಲೂಕು ಪ್ರೌಢಶಾಲೆಗಳ ಸಹಶಿಕ್ಷಕರ ಸಂಘದ ರವಿ ನಾಯ್ಕ ಎಲ್.ಟಿ., ಕಾರ್ಯದರ್ಶಿ ಮನೋಹರ ಎಸ್., ಬಿ. ಕುಮಾರ, ಚಿದಾನಂದ ವಡ್ಡರ, ಎಸ್‌ಡಿಎಂಸಿ ಅಧ್ಯಕ್ಷ ಚನ್ನಪ್ಪ ಹೊಳೆಯಾಚೆ, ಮಲ್ಲನಗೌಡ ಹಳೇಮನೆ, ಮುತ್ತಣ್ಣ ರೋಣದ, ಕರಿಯಪ್ಪ ಕೋವಿ, ರವಿ ಚೌಡಕಿ, ಮಹಾಂತೇಶ ಮುಗಳಿ, ಬಸವರಾಜ ಬಾರಕೇರ, ಕಾಶಿನಾಥ ಶಿರಬಡಗಿ, ಅನ್ನದಾನೇಶ, ಜೋಗಿನ್, ರೇಣುಕಾ ಚೌಡಕಿ, ಮುಖ್ಯಶಿಕ್ಷಕ ಎಂ.ಡಿ. ಮಾದರ ಇದ್ದರು.
ನಿವೃತ್ತ ದೈಹಿಕ ಶಿಕ್ಷಕ ವೈ.ಎಚ್. ಬಚ್ಚೇನಹಳ್ಳಿ, ಎನ್.ಎ. ಯರಗೂಡಿ, ಹೈತಾಪುರ ಗ್ರಾಮದ ದಾನಿಗಳನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ಯಕ್ಲಾಸಪುರ, ಹಳ್ಳಿಗುಡಿ, ಹಳ್ಳಿಕೇರಿ, ವೆಂಕಟಾಪುರ, ಬರದೂರು, ಜಂತ್ಲಿಶಿರೂರ, ಪೇಠಾಲೂರು ಪ್ರೌಢಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂ.ಎಚ್. ಸವದತ್ತಿ ಸ್ವಾಗತಿಸಿದರು. ದುರ್ಗಾಪ್ರಸಾದ ಡಿ. ಮಾತನಾಡಿದರು. ಕ್ರೀಡಾ ಪ್ರತಿಜ್ಞಾವಿಧಿಯನ್ನು ಶರಣಪ್ಪ ಮಲಭಾದಿ ಬೋಧಿಸಿದರು. ದುಂಡಪ್ಪ ಕಾಗವಾಡ, ಮಂಜು ಎಚ್.ಎಚ್. ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net