ಹಳ್ಳದಲ್ಲಿ ಕೊಚ್ಚಿಹೋದ ಯುವಕನ ಶವ ಪತ್ತೆ: ಪ್ರತಿಭಟನೆ

IMG-20240905-WA0000
Published on

ಮುಂಡರಗಿ:
ಹಳ್ಳವನ್ನು ದಾಟುವಾಗ ಬೈಕ್ ಸವಾರನೊಬ್ಬ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ತಾಲೂಕಿನ ನಾಗರಹಳ್ಳಿ ಮತ್ತು ಬೆಣ್ಣಿಹಳ್ಳಿ ಮಾರ್ಗಮಧ್ಯೆ ಬರುವ ಹಳ್ಳದಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆ ಏಣಗಿಬಸಾಪೂರ ಗ್ರಾಮದ ರವಿಕುಮಾರ ಸುತಾರಿ(೩೦) ಮೃತ ಬೈಕ್ ಸವಾರ. ರವಿಕುಮಾರ ಮತ್ತು ಆತನ ಸ್ನೇಹಿತ ಮಂಜಪ್ಪ ಬೊಮ್ಮಸಂದ್ರ ಇಬ್ಬರು ಸೇರಿ ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮಕ್ಕೆ ಬಂದು ಪುನಃ ಏಣಗಿಬಸಾಪೂರಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ರವಿಕುಮಾರ ಜೊತೆಗಿದ್ದ ಸ್ನೇಹಿತ ಮಂಜಪ್ಪ ಈಜಿ ದಡ ಸೇರಿದ್ದು, ರವಿಕುಮಾರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ, ಸ್ಥಳೀಯರು ಸೇರಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರವಿಕುಮಾರಗಾಗಿ ಶೋಧ ಕಾರ್ಯವನ್ನು ನಡೆಸಿ ಶವವನ್ನು ಪತ್ತೆ ಮಾಡಿದ್ದಾರೆ.
ಪ್ರತಿಭಟನೆ: ಹಳ್ಳಕ್ಕೆ ಸೇತುವೆ ನಿರ್ಮಿಸದ ಕಾರಣ ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ. ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ನಾಗರಹಳ್ಳಿ,ಬೆಣ್ಣಿಹಳ್ಳಿ ಮತ್ತಿತರ ಗ್ರಾಮಸ್ಥರು ದಿಢೀರನೆ ಬೆಣ್ಣಿಹಳ್ಳಿ ಸಮೀಪ ಅರಭಾವಿ-ಚಳ್ಳಕೇರಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಿದರೂ ಸೇತುವೆ ನಿರ್ಮಿಸಿಲ್ಲ. ಈ ಹಿಂದೆಯೂ ಬೈಕ್ ಸವಾರನೊಬ್ಬ ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದ. ಈಗ ಮತ್ತೆ ಬೈಕ್ ಸವಾರ ಮೃತಪಟ್ಟಿದ್ದಾನೆ. ಅನೇಕ ಬೈಕ್, ಟ್ರ್ಯಾಕ್ಟರ್, ಕಾರು ನೀರಲ್ಲಿ ಕೊಚ್ಚಿಹೋಗಿ ಅನಾಹುತಗಳು ನಡೆದಿವೆ. ಅನೇಕರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಇಂತಹ ಘಟನೆ ನಡೆಯುತ್ತಿವೆ. ತಕ್ಷಣವೇ ಹಳ್ಳಕ್ಕೆ ಸೇತುವೆ ನಿರ್ಮಿಸುವುದಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಗಂಗಪ್ಪ, ತಹಸೀಲ್ದಾರ್ ಎರ‍್ರಿಸ್ವಾಮಿ ಪಿ.ಎಸ್., ಪಿಡ್ಬ್ಲ್ಯೂಡಿ ಇಇ ವಿ.ಎನ್.ಪಾಟೀಲ, ಎಇಇ ಬಸವರಾಜ ಎಚ್, ಪಿಎಸ್‌ಐ ವಿ.ಜಿ.ಪವಾರ ಅವರು ಭೇಟಿ ನೀಡಿ ಪ್ರತಿಭಟನೆಕಾರರೊಂದಿಗೆ ಚರ್ಚಿಸಿದರು. ಗ್ರಾಮಸ್ಥರು ಘಟನೆ ಬಗ್ಗೆ ವಿವರಿಸಿದ ನಂತರ ಆದಷ್ಟು ಬೇಗ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು ಎಂದು ಎಸಿ ಗಂಗಪ್ಪ ಅವರು ಎಇಇ ಬಸವರಾಜ ಅವರಿಗೆ ಸೂಚಿಸಿದರು. ಸೇತುವೆನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಾಸ್ತವನೆ ಸಲ್ಲಿಸಿದ್ದು, ಅನುಮೋದನೆ ಸಿಗಬೇಕಿದೆ. 10 ದಿನದಲ್ಲಿ ತಾತ್ಕಲಿಕವಾಗಿ ಹಳ್ಳಕ್ಕೆ ಪೈಪ್ ಅಳವಡಿಸಿ ಮೇಲೆ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಆದಷ್ಟು ಬೇಗ ಸರ್ಕಾರದಿಂದ ಅನುಮೋದನೆ ಪಡೆದು ಶಾಶ್ವತವಾಗಿ ಸೇತುವೆ ನಿರ್ಮಿಸುವ ಕೆಲಸ ಮಾಡಲಾಗುವುದು ಎಂದು ಪಿಡ್ಬ್ಲ್ಯೂಡಿ ಎಇಇ ಬಸವರಾಜ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ಸುಮಾರು 2 ಗಂಟೆಗಳ ಸಮಯ ಹೆದ್ದಾರಿ ಸಂಚಾರ ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net