

ಮುಂಡರಗಿ: ಪುರಸಭೆ ಸಭಾಭವನದಲ್ಲಿ 2025- 26ನೇ ಸಾಲಿನಲ್ಲಿ 1.91ಕೋಟಿ ರೂ. ಉಳಿತಾಯ ಬಜೆಟ್ ಅನ್ನು ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಅವರು ಸೋಮವಾರ ಮಂಡಿಸಿದರು. ವಿವಿಧ ಮೂಲಗಳಿಂದ 34,94,13,000 ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಆ ಪೈಕಿ 33.3 ಕೋಟಿ ರೂ.ಗಳ ಖರ್ಚು ಅಂದಾಜಿಸಲಾಗಿದ್ದು, 1.91 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಧ್ಯಕ್ಷೆ ನಿರ್ಮಲಾ ಅವರು ಸಭೆಗೆ ವಿವರ ನೀಡಿದರು.
ತೆರಿಗೆ ಆದಾಯಗಳಿಂದ 3.39 ಕೋಟಿ ರೂ., ತೆರಿಗೆಯೇತರ ಆದಾಯಗಳಿಂದ 3.17 ಕೋಟಿ ರೂ., ಸರ್ಕಾರದ ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ, ಎಸ್‌ಎಫ್‌ಸಿ ವೇತನ ಅನುದಾನ, 15ನೇ ಹಣಕಾಸು, ಎಸ್‌ಎಫ್‌ಸಿ ವಿಶೇಷ ಅನುದಾನ, ಕುಡಿಯುವ ನೀರು ಸಮಸ್ಯೆ ಪರಿಹಾರ ಅನುದಾನ ಸೇರಿ ಇತರ ಮೂಲಗಳಿಂದ 14. 95 ಕೋಟಿ ರೂ. ಹಣ ನಿರೀಕ್ಷಿಸಲಾಗಿದೆ.
ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಕ್ಕಾಗಿ 15. 97 ಲಕ್ಷ ರೂ. ಪುರಸಭೆ ನಿಧಿಯಲ್ಲಿ ಎಸ್ಸಿಎಸ್ಟಿ ಕಲ್ಯಾಣ ಕಾರ್ಯಕ್ರಮ, ಹಿಂದುಳಿದ ಜನಾಂಗದ ಕಲ್ಯಾಣ ಕಾರ್ಯಕ್ರಮ, ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ 3.54 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.
ಯಾವುದಕ್ಕೆ ಖರ್ಚು?: ಕಾಯಂ ನೌಕರರ ವೇತನ, ದಿನಗೂಲಿ ನೌಕರರ ವೇತನ, ಹೊರಗುತ್ತಿಗೆ ನೌಕರರ ವೇತನ, ಕೆಎಂಆರ್‌ಪಿ ಸಿಬ್ಬಂದಿ ಸಮಾನ ವೇತನ, ಕಚೇರಿ ವಾಹನ ಬಾಡಿಗೆ, ಮುದ್ರಣ, ಲೇಖನ ಸಾಮಗ್ರಿಗಳು ಮತ್ತು ಫೋಟೋ ಕಾಪಿ ವೆಚ್ಚಗಳು, ಲೆಕ್ಕ ಪರಿಶೋಧನಾ ಶುಲ್ಕ, ಜಾಹೀರಾತು ಮತ್ತು ಪ್ರಕಟಣೆ, ದೂರವಾಣಿ ಸಂಪರ್ಕ ವೆಚ್ಚ, ಕಚೇರಿ ವಿದ್ಯುತ್ ವೆಚ್ಚಗಳು, ಕೌನ್ಸಿಲ್‌ರವರ ಗೌರವಧನ, ಚುನಾವಣೆ ವೆಚ್ಚಗಳು, ಇತರ ಖರ್ಚು ಸೇರಿ 6.48 ಕೋಟಿ ರೂ., ನೀರು ಸರಬರಾಜು ನಿರ್ವಹಣೆಗೆ 1.20 ಲಕ್ಷ ರೂ., ಆರೋಗ್ಯ ಶಾಖೆಗೆ 1.51 ಕೋಟಿ, ಬೀದಿದೀಪ ನಿರ್ವಹಣೆಗೆ 2.81 ಕೋಟಿ ರೂ., ಕಟ್ಟಡಗಳು, ಯಂತ್ರೋಪಕರಣಗಳು, ರಸ್ತೆಗಳು ಕಲ್ಲು ಹಾಸು ಅಳವಡಿಕೆ ಮತ್ತು ಪಾದಚಾರಿ ಮಾರ್ಗಗಳು, ಚರಂಡಿ ಸೇರಿ ಇತರ ಅಭಿವೃದ್ಧಿ ಕೆಲಸಗಳಿಗೆ ಒಟ್ಟು 13.72 ಲಕ್ಷ ಕೋಟಿ ರೂ. ಖರ್ಚು ಬರಲಿದೆ ಎಂದು ಮಾಹಿತಿ ನೀಡಿದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಅಭಿವೃದ್ಧಿ ಕೆಲಸ, ಸ್ವಚ್ಛ ಹಾಗೂ ಸುಂದರ ಪಟ್ಟಣವಾಗಿಸಲು ಆಯವ್ಯಯದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ತೆರಿಗೆ ವಸೂಲಾತಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿ ಉತ್ತಮ ಆಡಳಿತದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ 5 ಕೋಟಿ ರೂ. ಅನುದಾನ ಬರಲಿದೆ. ಅದರಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾತನಾಡಿ, ಹತ್ತು ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಪಟ್ಟಣವನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಲಾಗುತ್ತದೆ. ಮೂಲಸೌಕರ್ಯಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುವುದು ಎಂದು ತಿಳಿಸಿದರು.
ಸದಸ್ಯರಾದ ನಾಗರಾಜ ಹೊಂಬಳಗಟ್ಟಿ, ಜ್ಯೋತಿ ಹಾನಗಲ್, ಪ್ರಹ್ಲಾದ ಹೊಸಮನಿ, ಸಂತೋಷ ಹಿರೇಮನಿ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದರಫಿ ಮುಲ್ಲಾ, ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಟಿ.ಬಿ. ದಂಡಿನ, ಶಿವಪ್ಪ ಚಿಕ್ಕಣ್ಣವರ, ಶಾಂತವ್ವ ಕರಡಿಕೊಳ್ಳ, ಸುಮಾ ಬಳ್ಳಾರಿ, ದೇವಕ್ಕ ದಂಡಿನ, ಪ್ರಕಾಶ ಹಲವಾಗಲಿ, ಶಿವಾನಂದ ಬಾರಕೇರ, ರೈಮಾನಸಾಬ ಮಲ್ಲನಕೇರಿ ಇತರರಿದ್ದರು.