

ಮುಂಡರಗಿ: ಜೆಡಿಎಸ್ನಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ಪಟ್ಟಣ, ಗ್ರಾಮೀಣ ಸೇರಿ ಪ್ರತಿ ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಸಿ ಕಾರ್ಯಕರ್ತರನ್ನು ಸಂಘಟಿಸಿ, ಪಕ್ಷವನ್ನು ಬಲವರ್ಧನೆಗೊಳಿಸಲಾಗುವುದು ಎಂದು ಜೆಡಿಎಸ್ ಗದಗ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ ಹೇಳಿದರು.
ಪಟ್ಟಣದ ದೇವಾಂಗ ಸಮಾಜದ ಸಮುದಾಯ ಭವನದಲ್ಲಿ ತಾಲೂಕು ಜೆಡಿಎಸ್ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ, ಪಕ್ಷ ಸೇರ್ಪಡೆ, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾಧ್ಯಂತ ಜೆಡಿಎಸ್ ಬಲಪಡಿಸಲು ಎಲ್ಲ ಕಾರ್ಯಕರ್ತರು ಶ್ರಮ ವಹಿಸಬೇಕು. ಜೆಡಿಎಸ್ನಲ್ಲಿ ಮಹಿಳಾ ಕಾರ್ಯಕರ್ತೆಯರಿಗೆ ಆದ್ಯತೆ ನೀಡಲಾಗುವುದು. ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ ಪಕ್ಷದ ಬಲ ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ. ಕಾರ್ಯಕರ್ತರು ಪಕ್ಷದ ಸದಸ್ಯತ್ವವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ದೊಡ್ಡಮನಿ ಮಾತನಾಡಿ, ತಾಲೂಕಿನಾದ್ಯಂತ ಪಕ್ಷ ಸಂಘಟಿಸುವ ಕಾರ್ಯಕ್ಕೆ ಎಲ್ಲ ಕಾರ್ಯಕರ್ತರು ಕೈಜೋಡಿಸಬೇಕು. ಪಕ್ಷದ ಏಳಿಗೆಗೆ ನಾವೆಲ್ಲರೂ ಸೇರಿ ಕಾರ್ಯೋನ್ಮುಖವಾಗೋಣ ಎಂದರು.
ರತ್ನಾ ಪಾಟೀಲ, ಮಲ್ಲಮ್ಮ ರಾಟಿ, ಲಲಿತಮ್ಮ ಮಡಿವಾಳರ, ಶೀತಮ್ಮ ಕಂಪಗಲ್ಲ ಇತರರು ಜೆಡಿಎಸ್ಗೆ ಸೇರ್ಪಡೆಗೊಂಡರು. ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಮೇಟಿ, ಎಂ.ಈ. ಕವಲೂರ, ದ್ಯಾಮಣ್ಣ ಬಂಡಿವಡ್ಡರ, ಯಲ್ಲಪ್ಪ ಭಜಂತ್ರಿ, ತಿಪ್ಪಣ್ಣ ಹುಡೇದ, ಶಂಭುಲಿಂಗಯ್ಯ ಕಾಗನೂರಮಠ, ಸೋಮಣ್ಣ ಪೂಜಾರ, ಸಂಗಪ್ಪ ಯಕುಂಜಿ, ಯಲ್ಲಪ್ಪ ಬೂದಿಹಾಳ, ಕಳಕಪ್ಪ ಹೊಸಅಂಗಡಿ ಇತರರು ಇದ್ದರು.