ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ

7-MDG INDRDHANUSH
Published on

ಮುಂಡರಗಿ: ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಆ. 7ರಿಂದ 3 ತಿಂಗಳವರೆಗೆ ನಡೆಯಲಿದೆ. ಸರ್ಕಾರಿ ಆಸ್ಪತ್ರೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ ಟಿ.ಎಸ್. ಹೇಳಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಬ್ಯಾಲವಾಡಗಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇವಡ್ಡಟ್ಟಿ ಇವರ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಂದ್ರಧನುಷ್ 5.0 ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಾಖಲಾತಿಯಿಂದ ಬಿಟ್ಟು ಹೋದ ಹಾಗೂ ಲಸಿಕಾ ವಂಚಿತ ಮಕ್ಕಳಾದ 0-5 ವರ್ಷದವರೆಗಿನ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಉಚಿತವಾಗಿ ವಯಸ್ಸಿಗೆ ಅನುಗುಣವಾಗಿ ಲಸಿಕೆ ಹಾಕಲಾಗುವುದು. ಬಿಸಿಜಿ, ಪೆಂಟಾವ್ಯಾಲೆಂಟ್, ಪೋಲಿಯೋ ಹನಿ, ರೋಟಾವ್ಯಾಲೆಂಟ್, ಪಿಸಿವಿ, ಐಪಿವಿ, ಜೆಇ, ಎಂಆರ್., ಲಸಿಕೆ ಹಾಕಲಾಗುವುದು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಸಜ್ಜನರ ಮಾತನಾಡಿ, ಸರ್ಕಾರ 2023ರ ನವೆಂಬರ್ ವೇಳೆಗೆ ದಡಾರ ಮುಕ್ತ ಕರ್ನಾಟಕ ಮಾಡುವ ಗುರಿ ಹೊಂದಿದೆ. ಕೋವಿಡ್ ಕಾಲದಲ್ಲಿ ಲಸಿಕೆ ವಂಚಿತ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡಲಾಗುವುದು ಎಂದರು.
ಮಗು ಜನಿಸಿದ ಅಧರ್ ತಾಸಿನೊಳಗೆ ತಾಯಿಯು ಮಗುವಿಗೆ ಎದೆ ಹಾಲು ಕುಡಿಸಬೇಕು. ಇದರಿಂದ ಪ್ರಥಮ ಡೋಸ್ ಲಸಿಕೆ ನೀಡಿದಂತಾಗುತ್ತದೆ. ಇದರಿಂದ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಗು ಆರೋಗ್ಯಯುತವಾಗಿ ಬೆಳೆಯುತ್ತದೆ ಎಂದರು.
ಪುರಸಭೆ ಸದಸ್ಯೆ ರಿಯಾನಾಬೇಗಂ ಕೆಲೂರ ಮಗುವಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ನವರಿತಾಜ ಆಲೂರ ಅಧ್ಯಕ್ಷತೆ ವಹಿಸಿದ್ದರು. ರಾಧಾ ಬಾರಕೇರ, ಹುಚ್ಚಪ್ಪ ಬಿ.ಟಿ., ಎಂ.ಎ. ಮಾಶಾಳಕರ, ಕೆ.ಎ. ಮಡಿವಾಳರ ಇದ್ದರು. ಸಮುದಾಯ ಆರೋಗ್ಯಾಧಿಕಾರಿ ಬಿಬೀಆಯುಷಾ ಮಕಾಂದಾರ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ವಿ. ಬಿದರಿ ನಿರೂಪಿಸಿದರು. ಕವಿತಾ ರಾಠೋಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net