

ದೇವದುರ್ಗ: ತಾಲೂಕಿನ ಮುಂಡರಗಿ ಗ್ರಾಮದ ಕೆರೆಯಲ್ಲಿ 2-3 ದಿನಗಳಿಂದ ಮೊಸಳೆ ಪ್ರತ್ಯಕ್ಷವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ವಿಷಯ ಗ್ರಾಮದಲ್ಲಿ ಆತಂಕ ಮೂಡಿಸಿದ್ದು ಜನರು ಕೆರೆ, ಗದ್ದೆಕಡೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಗ್ರಾಮದ ಯುವಕರು ಹಾಗೂ ಜನರ ಮೊಬೈಲ್‌ನಲ್ಲಿ ಮೊಸಳೆ ಪ್ರತ್ಯಕ್ಷವಾದ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ. ಸುಮಾರು 20ಎಕರೆಯಷ್ಟು ಕೆರೆ ಮುಂಡರಗಿ ಹಾಗೂ ಪಂದ್ಯಾನ ಸೀಮೆಗೆ ಒಳಪಡುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ದೊಡ್ಡದೊಡ್ಡ ಹೊಂಡ ತೋಡಲಾಗಿದೆ. ಆ ನೀರಲ್ಲಿ ಮೊಸಳೆ ಬೀಡುಬಿಟ್ಟಿದೆ. ಸುತ್ತಲಿನ ಹೊಲಗದ್ದೆ ಹಾಗೂ ನಾರಾಯಣಪುರ ಬಲದಂಡೆ ನಾಲೆ ಕೊನೇ ನೀರು ಕೆರೆಗೆ ಸೇರುತ್ತಿದೆ.
ಪಂದ್ಯಾನ ಗ್ರಾಮದ ರಸ್ತೆ ಪಕ್ಕದ ಕೆರೆದಂಡೆ ಮೇಲೆ ಮೊಸಳೆ ಕಾಣಿಸಿಕೊಂಡಿದ್ದು ಜನರು ಕೆರೆಕಡೆ ಹೋಗಲು ಹೆದರುತ್ತಿದ್ದಾರೆ. ಕೆರೆ ಸುತ್ತಮುತ್ತ ಭತ್ತದ ಗದ್ದೆಯಿದ್ದು ಸುತ್ತಲೂ ಸದಾ ನೀರಿರುತ್ತವೆ. ಆಹಾರ ಹುಡುಕಿ ಮೊಸಳೆ ಹೊಲಗದ್ದೆಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಕೆರೆ, ಗದ್ದೆಗಳ ಕಡೆ ಹೋಗಲು ರೈತರು ಭಯಪಡುತ್ತಿದ್ದಾರೆ. ಕೃಷ್ಣಾನದಿಗೆ ಕೆರೆ ಸಂಪರ್ಕವಿಲ್ಲದಿದ್ದರೂ ಪಕ್ಕದ ಗುಡ್ಡ ಇಲ್ಲವೆ, ಬಲದಂಡೆ ನಾಲೆ ಮೂಲಕ ಮೊಸಳೆ ಕೆರೆಗೆ ಬಂದಿರಬಹುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಮೊಸಳೆ ಸೆರೆಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಬೇಕು ಎಂದು ಮುಂಡರಗಿ ಹಾಗೂ ಪಂದ್ಯಾನ ಗ್ರಾಮಸ್ಥರು ಆಗ್ರಹಿಸಿದ್ದಾರೆ.