ಬೃಹತ್ ಪಲ್ಲಕ್ಕಿ ಉತ್ಸವಕ್ಕೆ ಮುಂಡರಗಿ ಸಜ್ಜು

Mundaragi gears up for grand palanquin festival
Published on

ಮುಂಡರಗಿ: ಸ್ಥಳೀಯ ಜಗದ್ಗುರು ತೋಂಟದಾರ್ಯ ಮಠದಲ್ಲಿ ನಡೆದ ಆಷಾಢ ಮಾಸದ ಶರಣ ಚರಿತಾಮೃತ ಪ್ರವಚನ ನಿಮಿತ್ತ ಜು. 23ರಂದು ಪಟ್ಟಣದಲ್ಲಿ ನೂತನ ಬೃಹತ್ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಭಕ್ತರ ಸಹಕಾರದಿಂದ ನೂತನ ಪಲ್ಲಕ್ಕಿ ತಯಾರಾಗಿದೆ. ಶಿವಾನಿ ಕಟ್ಟಿಗೆಯಲ್ಲಿ ಸಿದ್ಧಗೊಂಡಿರುವ ಬೃಹತ್ ಪಲ್ಲಕ್ಕಿ ಸುತ್ತಲೂ ಅಷ್ಟಾವರ್ಣಗಳ ಕಲಾಚಿತ್ರ ಕೆತ್ತಲಾಗಿದೆ. ಪಲ್ಲಕ್ಕಿಯ ಮೇಲುಗಡೆ ಚಿಕ್ಕದಾಗಿರುವ ಬೆಳ್ಳಿ ಛತ್ರಿ ಕೂರಿಸಲಾಗಿದೆ. ಹಾಗೆಯೇ ಆಕರ್ಷಣೀಯವಾಗಿ ಕಾಣಲು ಬೆಳ್ಳಿ ಕವಚವಿರುವ ಗೊಂಡೆಗಳನ್ನು ಅಳವಡಿಸಲಾಗಿದೆ.

ಪಲ್ಲಕ್ಕಿ ಉತ್ಸವಕ್ಕಾಗಿ ಹೊಸದಾಗಿ ತಲಾ 20 ಕೆಜಿ ತೂಕದ ವಿಶ್ವಗುರು ಬಸವಣ್ಣ ಹಾಗೂ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರ ಕಂಚಿನ ಮೂರ್ತಿಯನ್ನು ತಯಾರಿಸಲಾಗಿದೆ. ಈ ಎರಡು ಮೂರ್ತಿ ಹಾಗೂ ವಚನ ಗ್ರಂಥಗಳನ್ನಿಟ್ಟು ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನೆರವೇರಲಿದೆ. ಇದನ್ನು ಭಕ್ತಿ-ಭಾವದಿಂದ ಕಣ್ತುಂಬಿಕೊಳ್ಳುವುದಕ್ಕೆ ಭಕ್ತ ಸಮೂಹ ಕಾತುರವಾಗಿದೆ.

15 ದಿನ ಪ್ರವಚನ: ಮಠದ ಪೀಠಾಧಿಪತಿ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪ್ರವಚನ ಸೇವಾ ಸಮಿತಿ ಪದಾಧಿಕಾರಿಗಳು ಎಲ್ಲರನ್ನೊಳಗೊಂಡು ಧಾರ್ಮಿಕ ಕಾರ್ಯಕ್ರಮದ ಜತೆಗೆ ಪ್ರವಚನ ಆಯೋಜನೆ ಮಾಡಿದೆ. 15 ದಿನಗಳವರೆಗೆ ಮುಂಡಗೋಡ ಅತ್ತಿವೇರಿ ಬಸವಧಾಮದ ಶ್ರೀ ಬಸವೇಶ್ವರಿ ಮಾತಾಜಿ ಅವರು ಶರಣ ಚರಿತಾಮೃತ ಪ್ರವಚನದ ಮೂಲಕ ಶರಣರ ತತ್ವ, ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಈ ಬಾರಿ ಶ್ರೀ ಎಡೆಯೂರ ಸಿದ್ಧಲಿಂಗೇಶ್ವರರ ಬೆಳ್ಳಿ ರಜತ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.

ಸಾಂಸ್ಕೃತಿಕ ರಸದೌತಣ: ಜನಪದ ಸಂಭ್ರಮ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂತು. ಹಾಸ್ಯ ಕಲಾವಿದ ಶರಣು ಯಮನೂರ ಅವರ ಹಾಸ್ಯಸಂಜೆ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿತು. ಸಾಂಸ್ಕೃತಿಕ ನಾಯಕ ಬಸವಣ್ಣ ಮತ್ತು ಪತ್ರಿಕಾ ದಿನ ಆಚರಿಸಲಾಯಿತು. ಧಾರವಾಡದ ವಚನ ವೈಭವ ರತಿಕಾ ನೃತ್ಯ ಶಾಲೆಯ ಕಲಾವಿದರಿಂದ ವಚನ ವೈಭವ ನೃತ್ಯಗಳು ಜನರಮನ ಸೂರೆಗೊಂಡವು.

ಶರಣರ ತತ್ವ ಪ್ರಸಾರದಲ್ಲಿ ಮುಂಚೂಣಿ: ಬಸವಾದಿ ಶರಣರ ಚಿಂತನೆ, ವಚನ ತತ್ವ ಪ್ರಸಾರಗೊಳಿಸುವಲ್ಲಿ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ತೊಡಗಿಸಿಕೊಂಡಿದ್ದಾರೆ. ಬಸವಾದಿ ಶರಣರ ತತ್ವಾದರ್ಶ ಮೈಗೂಡಿಸಿಕೊಂಡು ಭಾವೈಕ್ಯದ ಮೂಲಕ ಸಮಾಜದಲ್ಲಿ ಸಮಾನತೆ ಶ್ರಮಿಸುತ್ತಿದ್ದಾರೆ. ಸುಮಾರು 40 ವರ್ಷಗಳಿಂದ ನಾಡಿನೆಲ್ಲೆಡೆ ತಮ್ಮ ಕಂಚಿನ ಕಂಠದ ಮೂಲಕ ಬಸವಾದಿ ಶರಣರ ವಿಚಾರ ಚಿಂತನೆಗಳನ್ನು ಜನರಲ್ಲಿ ತಲುಪಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಪ್ರವಚನ ನಡೆಸಿಕೊಟ್ಟಿರುವ ಶ್ರೀಗಳಿಗೆ ರಾಜ್ಯ, ಹೊರ ರಾಜ್ಯ, ವಿದೇಶಗಳಲ್ಲೂ ಭಕ್ತ ಸಮೂಹವಿದೆ.

ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಎಲ್ಲ ಪದಾಧಿಕಾರಿಗಳು, ಭಕ್ತರ ಸಹಕಾರದಲ್ಲಿ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಪ್ರವಚನದ ಜತೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲರ ಗಮನ ಸೆಳೆಯಿತು. ನೂತನ ಪಲ್ಲಕ್ಕಿ ಉತ್ಸವಕ್ಕೆ ಸಕಲ ಸಿದ್ಧತೆ ಆಗಿದೆ. ಬಸಯ್ಯ ಗಿಂಡಿಮಠ, ಪ್ರವಚನ ಸಮಿತಿ ಅಧ್ಯಕ್ಷ ಜಗದ್ಗುರು ತೋಂಟದಾರ್ಯ ಮಠ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net