

ಮುಂಡರಗಿ: ತಾಲೂಕಿನ ಇತಿಹಾಸ ಈ ಭಾಗದ ಜನರಿಗೆ ಪರಿಚಿತವಾಗಲಿ ಎನ್ನುವ ಉದ್ದೇಶದಿಂದ ಮುಂಡರಗಿ ಉತ್ಸವ ಆಚರಿಸಲಾಗುತ್ತಿದೆ ಎಂದು ಮುಂಡರಗಿ ಉತ್ಸವ ಸಮಿತಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಪಟ್ಟಣದ ಶ್ರೀಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ತಾಲೂಕು ಉತ್ಸವ ಸಮಿತಿ ವತಿಯಿಂದ ಮಂಗಳವಾರ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1856ರಲ್ಲಿ ಮುಂಡರಗಿ ಬಂಡಾಯ ಭೀಮರಾಯರು, ಹಮ್ಮಿಗಿ ಕೆಂಚನಗೌಡ್ರು, ಡಂಬಳ ವೆಂಕಟಾದ್ರಿ ದೇಸಾಯಿ ಅವರ ಸಾಮೂಹಿಕ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು. ಕೊಪ್ಪಳ ಭಾಗದಲ್ಲಿ ಹೋರಾಟ ಗಂಭೀರ ಸ್ವರೂಪ ತಾಳಿದ ನಂತರ ಭೀಮರಾಯರು ಬ್ರಿಟಿಷರ ಗುಂಡೇಟಿಗೆ ಬಲಿಯಾದರು. ಅನೇಕ ಸ್ವಾತಂತ್ರ್ಯ ಸೇನಾನಿಗಳು ಬ್ರಿಟಿಷರ ಸೆರೆಯಾದರು. ಸೆರೆಯಾದವರನ್ನು ಕೊಲ್ಲಲಾಯಿತು. ಆ ಸ್ಮರಣೆಗಾಗಿ ಉತ್ಸವ ಆಚರಿಸಲಾಗುತ್ತಿದೆ ಎಂದರು.
ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳವರು ಸಾನ್ನಿಧ್ಯ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ಬಂಡಾಯ ಭೀಮರಾಯ ವಂಶಸ್ಥ ವಿ.ಎಲ್. ನಾಡಗೌಡ್ರ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಪ್ರಾಚಾರ್ಯರಾದ ಡಾ. ಡಿ.ಸಿ. ಮಠ, ಎಸ್.ಆರ್. ಚಿಗರಿ, ನಾಗರಹಳ್ಳಿಯ ನಿವೃತ್ತ ಪೋಸ್ಟ್ ಮಾಸ್ಟರ್ ಶಿವಣ್ಣ ಕೊಂಚಿಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಈಶ್ವರಪ್ಪ ಹಂಚಿನಾಳ, ಕಾಂತರಾಜ ಹಿರೇಮಠ, ಬಸವರಾಜ ರಾಮೇನಹಳ್ಳಿ, ರುದ್ರಗೌಡ ಪಾಟೀಲ, ರಾಮಣ್ಣ ಇಲ್ಲೂರ, ಮಹ್ಮದರಫೀಕ್ ಮುಲ್ಲಾ, ರಾಜಾಭಕ್ಷಿ ಬೆಟಗೇರಿ, ದಸ್ತಗೀರ್ ಹೊಸಮನಿ, ಅರುಣ್ ಬೆಲ್ಲದ, ಆರ್.ವೈ.ಪಾಟೀಲ, ವೆಂಕಟೇಶ ಗುಗ್ಗರಿ, ನಾಗರಾಜ ಕೊರ್ಲಹಳ್ಳಿ, ಪಾಲಾಕ್ಷಿ ಗಣದಿನ್ನಿ, ಡಾ. ಸಂತೋಷ ಹಿರೇಮಠ, ವೈ.ಎಚ್. ಬಚ್ಚೆನಹಳ್ಳಿ, ಅಡಿವೆಪ್ಪ ಚಲವಾದಿ, ಭೀಮರಡ್ಡಿ ರಾಜೂರು, ಆನಂದ ರಾಮೇನಹಳ್ಳಿ, ಸುರೇಶ ಗಂಗಾಧರ ದೊಡ್ಡಮನಿ, ಮಹಾಂತಯ್ಯ ಹಿರೇಮಠ ಇತರರು ಇದ್ದರು. ಜನಪದ ಕಲಾವಿದ ಗವಿಸಿದ್ದಯ್ಯ ಹಿರೇಮಠ ಪ್ರಾರ್ಥಿನಿಸಿದರು. ಮಂಜುನಾಥ ಇಟಗಿ ಕಾರ್ಯಕ್ರಮ ನಿರ್ವಹಿಸಿದರು.