

ಮುಂಡರಗಿ: ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ಆಚರಣೆ ಕುರಿತು ಭಕ್ತರ ಪೂರ್ವಭಾವಿ ಸಭೆ ಬುಧವಾರ ರಾತ್ರಿ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ, ಉತ್ತರಾಧಿಕಾರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿತು.
ಫೆ. 25, 26ರಂದು ಮಠದ ಜಾತ್ರೆ ಜರುಗಲಿದೆ. ಕರೊನಾದಿಂದ ಜಾತ್ರಾ ಮಹೋತ್ಸವವನ್ನು ಸಂಕ್ಷಿಪ್ತ, ಸಾಂಕೇತಿಕವಾಗಿ ಆಚರಿಸಲು ಭಕ್ತರು ನಿರ್ಧರಿಸಿದರು. ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ಜಾತ್ರೆ ನಡೆಸಬೇಕಾಗಿದೆ. ಸಡಗರದಿಂದ ಜಾತ್ರೆ ಆಚರಿಸಬೇಕೆಂಬ ಉತ್ಸಾಹವಿದ್ದರೂ ಸರ್ಕಾರದ ನಿಯಮ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಾತ್ರೆಯನ್ನು ಸಾಂಕೇತಿಕವಾಗಿ ಆಚರಿಸುವುದು ಸೂಕ್ತ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆ ಕೈಬಿಡಲು ಬರುವುದಿಲ್ಲ. ಕರೊನಾ ಹರಡಬಹುದೆಂಬ ಭೀತಿಯಿಂದ ಎಲ್ಲ ಕಾರ್ಯಕ್ರಮಗಳನ್ನು ತುಂಬಾ ಸರಳವಾಗಿ ಮತ್ತು ಸಾಂಕೇತಿಕವಾಗಿ ಆಚರಿಸೋಣ. ಮಠಗಳಿಗೆ ಭಕ್ತರೇ ಆಸ್ತಿ. ಭಕ್ತರ ಇಚ್ಛೆಯಂತೆ ಜಾತ್ರಾ ಮಹೋತ್ಸವ ಆಚರಿಸಲು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಕರಬಸಪ್ಪ ಹಂಚಿನಾಳ, ಮಂಜುನಾಥ ಇಟಗಿ, ಯು.ಸಿ. ಹಂಪಿಮಠ, ದಿಲೀಪಕುಮಾರ ಜೋಶಿ, ಚೇತನ ಹೊಸಮಠ, ದೇವೇಂದ್ರಪ್ಪ ರಾಮೇನಹಳ್ಳಿ, ಶರಣಪ್ಪ ಕುಬಸದ, ಪವನ ಮೇಟಿ ಮೊದಲಾದವರು ಮಾತನಾಡಿದರು. ಡಾ. ಬಿ.ಜಿ. ಜವಳಿ, ಡಾ. ಡಿ.ಸಿ. ಮಠ, ಶರಣಯ್ಯ ಕಾಗನೂರಮಠ, ಎಸ್.ಸಿ. ಚಕ್ಕಡಿಮಠ ಇತರರಿದ್ದರು.