

ಮುಂಡಗೋಡ: ಪಟ್ಟಣ ಪಂಚಾಯಿತಿ ಹಿಂಬದಿ ನಿರ್ಮಾಣವಾಗುತ್ತಿರುವ ಹೈಟೆಕ್ ಸಂತೆ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಅನುದಾನದ ಕೊರತೆಯಿಂದ ಎರಡು ವರ್ಷಗಳಿಂದ ಸ್ಥಗಿತಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣ ಪಂಚಾಯಿತಿ ಕಚೇರಿ ಹಿಂಬದಿ ಸಂತೆ ಮಾರುಕಟ್ಟೆಯಿದ್ದು, ಪ್ರತಿ ಸೋಮವಾರ ದೊಡ್ಡ ಪ್ರಮಾಣದಲ್ಲಿ ಸಂತೆ ನಡೆಯುತ್ತದೆ. ಇಪ್ಪತ್ತು ಸಾವಿರದಷ್ಟು ಜನರು ಸಂತೆಗೆ ಆಗಮಿಸುವುದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತಿಹೆಚ್ಚು ಜನಸೇರುವ ವಾರದ ಸಂತೆ ಎಂಬ ಹೆಗ್ಗಳಿಕೆಯನ್ನೂ ಇದು ಹೊಂದಿದೆ.
1970ರ ದಶಕದಲ್ಲಿ ಪಟ್ಟಣ ಪಂಚಾಯಿತಿ ಹಿಂಬದಿಯಲ್ಲಿ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲಾಗಿತ್ತು. ಆದರೆ, ವರ್ಷಗಳು ಕಳೆದಂತೆ ಅದು ಶಿಥಿಲಾವಸ್ಥೆ ತಲುಪಿತ್ತು. ಅದನ್ನು ತೆರವುಗೋಳಿಸಿ ಹೈಟೆಕ್ ಸಂತೆ ಮಾರುಕಟ್ಟೆ ನಿರ್ಮಿಸಲು ಪಟ್ಟಣ ಪಂಚಾಯಿತಿ ಯವರು ಮುಂದಾಗಿ, 2.50 ಕೋಟಿ ರೂ. ಅನುದಾನದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದರು. ಸರ್ಕಾರ ವಿಶೇಷ ಅನುದಾನವಾಗಿ 1.50 ಕೋಟಿ ರೂ.ಬಿಡುಗಡೆ ಮಾಡಿತ್ತು. 2018-19ನೇ ಸಾಲಿನಲ್ಲಿ ಮಾರುಕಟ್ಟೆ ಕಾಮಗಾರಿ ಆರಂಭಿಸಲಾಗಿತ್ತು. ಇದರಿಂದಾಗಿ ಗುತ್ತಿಗೆದಾರ ಹಳೆಯ ಮಾರುಕಟ್ಟೆಯನ್ನು ತೆರವುಗೊಳಿಸಿ ನೂತನ ಮಾರುಕಟ್ಟೆಯ ಕಾಮಗಾರಿ ಆರಂಭಿಸಿದ್ದು, ಕ್ರಿಯಾ ಯೋಜನೆಯಂತೆ ಪಿಲ್ಲರ್‌ಗಳು ತಲೆಎತ್ತಿ ಎರಡು ವರ್ಷಗಳು ಕಳೆದರೂ, ಮುಂದಿನ ಕಾಮಗಾರಿಗೆ ಅನುದಾನವಿಲ್ಲ.
ಅನುದಾನ ಬಂದ ನಂತರ ಟೆಂಡರ್ ಕರೆದು ಕೆಲಸ ಆರಂಭಿಸಬೇಕು. ಆದರೆ, ಎರಡು ವರ್ಷದಿಂದ ಅನುದಾನ ಬಾರದೇ ಅಧಿಕಾರಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪಟ್ಟಣ ಪಂಚಾಯಿತಿಯವರು ಸಂತೆ ಮಾರುಕಟ್ಟೆಯ ಕಾಮಗಾರಿ ಪೂರ್ತಿಗೋಳಿಸಲು ಅನುದಾನದ ಅವಶ್ಯಕತೆಯಿದ್ದು ಕೂಡಲೆ ಅನುದಾನ ನೀಡುವಂತೆ ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾವನೆ ಕಳುಹಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ.
ಮಳೆಗಾಲದಲ್ಲಿ ವ್ಯಾಪಾರಸ್ಥರ ಪರದಾಟ ಮಳೆಗಾಲದಲ್ಲಿ ವ್ಯಾಪಾರಸ್ಥರು ರಸ್ತೆಯ ಅಂಚಿನಲ್ಲಿ ತರಕಾರಿಗಳನ್ನು ಮಾರಾಟಕ್ಕೆ ಇಡುತ್ತಾರೆ. ಸುರಿಯುವ ಮಳೆಯಲ್ಲಿ ಪ್ಲಾಸ್ಟಿಕ್ ಕಟ್ಟಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ನಿರಂತರವಾಗಿ ಸುರಿಯುವ ಮಳೆ ಗಾಳಿಗೆ ವ್ಯಾಪಾರಸ್ಥರು ಹಾಗೂ ಸಂತೆಗೆ ಬರುವ ಜನರು ತೊಂದರೆ ಅನುಭವಿಸುವಂತಾಗಿದೆ. ಮಾರುಕಟ್ಟೆ ನಿರ್ಮಾಣವಾದರೆ ಈ ಸಮಸ್ಯೆ ತಪ್ಪಲಿದೆ.
ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಅನುದಾನ ಮಂಜೂರಾಗಿತ್ತು. ಅದರಲ್ಲಿ ಪಿಲ್ಲರ್ ನಿರ್ಮಿಸಲಾಗಿದೆ. ಇದೀಗ ಉಳಿದ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು. ಕುಮಾರ ನಾಯ್ಕ, ಪಪಂ ಮುಖ್ಯಾಧಿಕಾರಿ