

ಮುಂಡಗೋಡ: ಸದಾ ಒಂದಿಲ್ಲೊಂದು ವಿವಾದಗಳಿಂದಲ್ಲೇ ಸದ್ದು ಮಾಡುತ್ತಿರುವ ಮುಂಡಗೋಡ ಉಪ ನೋಂದಣಿ ಕಚೇರಿಯಲ್ಲಿ ಅಕ್ರಮ, ನಕಲಿ ದಾಖಲಾತಿ ಸೃಷ್ಟಿ ಹಾಗೂ ಕಾನೂನು ಬಾಹಿರವಾಗಿ ನೋಂದಣಿ ಮಾಡಲಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿರುವುದಲ್ಲದೆ, ಸಿಬ್ಬಂದಿಗಳ ಬದಲಾವಣೆ ಮಾಡುವಂತೆ ಸಾರ್ವಜನಿಕರು ಹಾಗೂ ಹಿಂದುಪರ ಸಂಘಟನೆಗಳು ಆಗ್ರಹಿಸಿವೆ.
ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಲು ಸರ್ಕಾರಿ ಶುಲ್ಕಕ್ಕಿಂತ ಅಧಿಕ ಹಣ ಪಡೆಯುವುದು, ನಕಲಿ ದಾಖಲಾತಿ ಸೃಷ್ಟಿಸಿ ವಿವಾಹ ನೋಂದಣಿ, ಅಕ್ರಮ ಮತ್ತು ಬಲವಂತದಿಂದ ಜಮೀನು ಕ್ರಯ ಪತ್ರಗಳಿಗೆ ಸಹಿ ಪಡೆದುಕೊಳ್ಳುವುದು ಮಾಡಲಾಗುತ್ತಿದೆ ಎಂಬರೋಪಗಳಲ್ಲದೆ, ಕಚೇರಿಯ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.
ಕಳೆದ ಒಂದು ವರ್ಷದ ಹಿಂದೆ ಕೊಳಗೇರಿ ನಿಮೂಲನಾ ಮಂಡಳಿ ವತಿಯಿಂದ ಅರ್ಹ ಫಲಾನುಭವಿಗಳಿಗೆ ನೀಡಲಾಗಿದ್ದ ಅಧಿಕೃತ ಹಕ್ಕು ಪತ್ರ ನೋಂದಣಿ ಮಾಡಲು ಕಚೇರಿಯ ಸಿಬ್ಬಂದಿ ಸರ್ಕಾರಿ ಶುಲ್ಕಕ್ಕಿಂತ ಹೆಚ್ಚು ಹಣ ಕೇಳುತ್ತಾರೆ. ಹಣ ನೀಡದಿದ್ದಲ್ಲಿ ಸರ್ವರ್ ಇಲ್ಲ, ಸಿಬ್ಬಂದಿ ಇಲ್ಲ ಎಂದು ನೆಪ ಹೇಳುತ್ತಾರೆ ಎಂದು ಆರೋಪಿಸಿ ಕಂಬಾರಗಟ್ಟಿ ನಿವಾಸಿಗಳು ತಹಸೀಲ್ದಾರ್ ಮುಖಾಂತರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಇನ್ನು ಕಳೆದ ಒಂದು ತಿಂಗಳ ಹಿಂದಷ್ಟೆ ಉಪ ನೋಂದಣಿ ಸಿಬ್ಬಂದಿ ಮುಖಾಂತರ ಬಲವಂತವಾಗಿ ಜಮೀನಿನ ಕ್ರಯ ಪತ್ರಗಳಿಗೆ ಸಹಿ ಪಡೆದುಕೊಂಡು ಜಮೀನು ವರ್ಗಾವಣೆ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾಹ ನೋಂದಣಿ ಗಲಾಟೆ: ಸದ್ಯ ಯೂಟ್ಯುಬರ್ ಖ್ವಾಜಾ ಅಲಿಯಾಸ್ ಮುಕಳೆಪ್ಪ ಹಾಗೂ ಸಿಬ್ಬಂದಿಗಳು ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿಕೊಂಡು ಹಿಂದು ಯುವತಿ ಜೊತೆ ವಿವಾಹ ನೋಂದಣಿ ಮಾಡಲಾಗಿದೆ ಎಂದು ಆರೋಪಿಸಿರುವ ಯುವತಿ ಕುಟುಂಬಸ್ಥರು ಹಾಗೂ ಹಿಂದುಪರ ಸಂಘಟನೆಗಳು ಉಪ ನೋಂದಣಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿರುವುದಲ್ಲದೆ ಸಿಬ್ಬಂದಿಗಳು ಸೇರಿ 7 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕ್ರಮಕ್ಕೆ ಮುಂದಾಗುವರೆ: ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಉಪ ನೋಂದಣಿ ಕಚೇರಿ ಸಿಬ್ಬಂದಿಗಳ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಅಲ್ಲದೆ, ಶಾಸಕ ಶಿವರಾಮ ಹೆಬ್ಬಾರ ಬಳಿ ಮುಖಂಡರು, ಸಾರ್ವಜನಿಕರು ಸಿಬ್ಬಂದಿಗಳ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಶಾಸಕರು ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳವ ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಂಡು ಬದಲಾವಣೆ ಸಹ ಮಾಡಲು ಮುಂದಾಗಿಲ್ಲ. ಈಗ ಸಾಕಷ್ಟು ಆರೋಪಗಳ ಜತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಲಾಗಿದೆ. ಈಗಲಾದರೂ ಹಿರಿಯ ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಂಡು ಬದಲಾವಣೆಗೆ ಮುಂದಾಗುತ್ತಾರೋ ಕಾದು ನೋಡಬೇಕಾಗಿದೆ.