ಕಟ್ಟಿಗೆ ಕಳ್ಳರ ವಿರುದ್ಧ ಕ್ರಮಕ್ಕೆ ಮೀನಮೇಷ

31-mnd- story
Published on

ಮುಂಡಗೋಡ: ಪಟ್ಟಣದ ಮರಮಟ್ಟು ಸಂಗ್ರಹಾಲಯದಿಂದ (ಕಟ್ಟಿಗೆ ಡಿಪೋ) ಕಟ್ಟಿಗೆ ನಾಪತ್ತೆಯಾದ ಪ್ರಕರಣ ನಡೆದು ಎರಡು ತಿಂಗಳಾಗುತ್ತ ಬಂದರೂ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ಸಾರ್ವಜನಿಕರಲ್ಲಿ ಇಲಾಖೆಯ ಕುರಿತು ಸಂಶಯ ಮೂಡುವಂತೆ ಮಾಡಿದೆ.
ಜೂ. 9ರಂದು ಮರಮಟ್ಟು ಸಂಗ್ರಹಾಲಯದಿಂದ ಎರಡು ಲಾರಿಗಳಲ್ಲಿ ಅಕ್ರಮವಾಗಿ 20 ಲಕ್ಷ ರೂ.ಮೌಲ್ಯದ ಸಾಗವಾನಿ, ಮತ್ತಿ, ಕಿಂದಳ, ದಾಮನ್ ನಾಟಾಗಳನ್ನು ಸಾಗಾಟ ಮಾಡುತ್ತಿರುವಾಗ ಶಿರಸಿ ಸನಿಹದ ಎಕ್ಕಂಬಿ ಚೆಕ್‌ಪೋಸ್ಟ್‌ನಲ್ಲಿ ಶಿರಸಿ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದರು.
ಬಳಿಕ ಲಾರಿಗಳನ್ನು ತಪಾಸಣೆ ನಡೆಸಿದಾಗ ಕಟ್ಟಿಗೆ ಡಿಪೋದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಅಕ್ರಮವಾಗಿ ಕಟ್ಟಿಗೆ ಸಾಗಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಈ ಹಿನ್ನೆಲೆಯಲ್ಲಿ ಐವರು ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಆರ್‌ಎಫ್‌ಒ ಅವರನ್ನು ಅಮಾನತು ಮಾಡಲಾಗಿತ್ತು. ನಂತರ ಅರಣ್ಯ ಇಲಾಖೆಯ ಎಪಿಸಿಸಿಎಫ್ ಕುಮಾರ ಪುಷ್ಕರ್ ತಂಡ ಕಟ್ಟಿಗೆ ಡಿಪೋಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಹತ್ತು ದಿನಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದರು. ಆದರೆ, ಘಟನೆ ನಡೆದು ಎರಡು ತಿಂಗಳು ಸಮೀಪಿಸುತ್ತ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ದೂರು.
ತನಿಖಾ ತಂಡದಿಂದ ವರದಿ: ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ಕಾರವಾರ ಡಿಎಫ್‌ಒ ಪ್ರಶಾಂತ ಕೆ.ಸಿ. ತಂಡಕ್ಕೆ ವಹಿಸಲಾಗಿತ್ತು. ತಂಡವು ಸಮಗ್ರ ತನಿಖೆ ಕೈಗೊಂಡು 200ಕ್ಕೂ ಹೆಚ್ಚು ಪುಟಗಳ ವರದಿಯನ್ನು ಸಲ್ಲಿಸಿ ತಿಂಗಳಾಗಿದೆ. ಪ್ರಕರಣ ಮುಚ್ಚಿ ಹಾಕಿದರೆ?: ಪ್ರಕರಣ ನಡೆದು ಎರಡು ತಿಂಗಳಾಗುತ್ತ ಬಂದಿದೆ. ತನಿಖಾ ತಂಡದ ಅಧಿಕಾರಿಗಳು ವರದಿ ಸಲ್ಲಿಸಿದರೂ ತಪ್ಪಿತಸ್ಥ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಈವರೆಗೆ ಯಾಕೆ ಕಾನೂನು ಕ್ರಮ ಕೈಗೊಂಡಿಲ್ಲ? ಆರಂಭದಲ್ಲಿ ಕೆಲವರನ್ನು ಅಮಾನತು ಮಾಡಿರುವುದನ್ನು ಬಿಟ್ಟರೆ ಬೇರಾವ ಕ್ರಮ ಜರುಗಿಸಿಲ್ಲ. ಸಾರ್ವಜನಿಕರು ಯಾರಾದರೂ ಕಟ್ಟಿಗೆ ಕಳ್ಳತನ ಮಾಡಿದ್ದರೆ ಇಲಾಖೆಯ ಅಧಿಕಾರಿಗಳು ಅವರನ್ನು ಜೈಲಿಗೆ ಕಳುಹಿಸುತ್ತಿದ್ದರು. ಆದರೆ, ಇಲಾಖೆಯವರು ‘ತಮ್ಮವರು’ ಎಂಬ ಉದ್ದೇಶದಿಂದ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಅರಣ್ಯ ಇಲಾಖೆಯ ಕಟ್ಟಿಗೆ ಡಿಪೋದಲ್ಲಿನ ಕಟ್ಟಿಗೆ ಅಕ್ರಮ ಸಾಗಾಟ ಪ್ರಕರಣ ನಡೆದು ಎರಡು ತಿಂಗಳು ಕಳೆಯುತ್ತ ಬಂದಿದೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ ಎಂಬ ಸಂಶಯ ಮೂಡುತ್ತಿದೆ. ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಬೇಗ ಕ್ರಮ ಕೈಗೊಳ್ಳಬೇಕು.ಚಿದಾನಂದ ಹರಿಜನರಾಜ್ಯ ಸಂಚಾಲಕರು ದಲಿತ ರಕ್ಷಣಾ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net