

ಮುಂಡಗೋಡ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಸಿಯೂಟ ತಯಾರಿ ವೇಳೆ ಗಾಯಗೊಂಡಿದ್ದ ಅಡುಗೆ ಸಹಾಯಕಿ ಚಿಕಿತ್ಸೆಗೆ ಸ್ಪಂದಿಸದೇ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಅನ್ನಪೂರ್ಣ ಶಂಕರ ಹುಳ್ಯಾಳ (49) ಮೃತಪಟ್ಟವರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಅಡುಗೆ ಮಾಡುತ್ತಿರುವಾಗ ಇತ್ತೀಚೆಗೆ ಸಾಂಬಾರು ಮೈಮೇಲೆ ಬಿದ್ದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಲಕ್ಷ್ಯದಿಂದ ಮರಣ ಆರೋಪ
ಹುಬ್ಬಳ್ಳಿ: ಇಲ್ಲಿಯ ಕಿಮ್ಸ್‌ನಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಅನ್ನಪೂರ್ಣ ಹುಲಿಯಾಳ್ ಮೃತಪಟ್ಟಿದ್ದಾಳೆ ಎಂದು ಮುಂಡಗೋಡದ ಕುಟುಂಬಸ್ಥರು ಆರೋಪಿಸಿದ್ದಾರೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ರೋಗಿಯು ಕಳೆದ ಒಂದು ವಾರದಿಂದ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಏಕಾಏಕಿ ಮಹಿಳೆ ಸಾವಿಗೀಡಾಗಿದ್ದಾಳೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೇ ಇರುವುದೇ ಕಾರಣ ಎಂದು ದೂರಿದರು.