

ಚಿಕ್ಕಬಳ್ಳಾಪುರ: ನ್ಯಾಯಾಲಯದ ತಡೆಯಾಜ್ಞೆಯ ಹೆಸರಿನಲ್ಲಿ ಪುರಸಭೆ ಅಧಿಕಾರಿಗಳನ್ನು ನಂಬಿಸಿ, ಲಕ್ಷಾಂತರ ರೂ ಬಾಡಿಗೆ ವಂಚಿಸಿದ ಮತ್ತು ಟ್ರೇಡ್ ಲೈಸೆನ್ಸ್ ಪಡೆಯದೇ ಬಾಗೇಪಲ್ಲಿಯ ಸರ್ಕಾರಿ ಮಳಿಗೆಗಳಲ್ಲಿ ಅನಧಿಕೃತವಾಗಿ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ಪುರಸಭೆ ಮುಖ್ಯಾಧಿಕಾರಿ ಕೆ.ಮಧುಕರ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಅಂಗಡಿ ಮಳಿಗೆಗಳಿಗೆ ಪುರಸಭೆ ಅಧಿಕಾರಿಗಳು ಬೀಗ ಜಡಿದು, ನಿಯಮಾನುಸಾರ ವಶಕ್ಕೆ ಪಡೆದುಕೊಂಡಿದ್ದಾರೆ.
2003 ನೇ ಸಾಲಿನಲ್ಲಿ ಬಹಿರಂಗ ಹರಾಜು ಮೂಲಕ ಬಾಗೇಪಲ್ಲಿ ಪಟ್ಟಣದ ಮುಖ್ಯ ರಸ್ತೆಯ ಹಳೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿರುವ ಪುರಸಭೆಯ ವಾಣಿಜ್ಯ ಅಂಗಡಿ ಮಳಿಗೆಗಳನ್ನು ಮೂರು ವರ್ಷಗಳ ಅವಧಿಗೆ 1500 ರೂ ಬಾಡಿಗೆಗೆ ಪಡೆದುಕೊಂಡಿದ್ದ ಅಂಗಡಿ ಮಾಲೀಕರು, ಅವಧಿ ಮುಗಿದರೂ ಮಾಲೀಕರು ಖಾಲಿ ಮಾಡದೇ ಸತಾಯಿಸುತ್ತಿದ್ದರು. ಮರು ಹರಾಜಿನ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇನ್ನು 2017 ರಲ್ಲಿಯೇ ಖಾಲಿ ಮಾಡಲು ಆದೇಶ ಬಂದರೂ ಕುಂಟು ನೆಪ ಹೇಳಿಕೊಂಡು ಬಂದಿದ್ದರು. ಇದಕ್ಕೆ ಕೊನೆಗೆ ಅಧಿಕಾರಿಗಳು ನಿಯಮಾನುಸಾರವೇ ಪಾಠ ಕಲಿಸಿದ್ದಾರೆ.
ಪುರಸಭೆ ಕಚೇರಿಯಲ್ಲಿ ಟ್ರೇಡ್ ಲೈಸೆನ್ಸ್ ಪಡೆದಿಲ್ಲ. 2006 ಕ್ಕೆ ಬಾಡಿಗೆ ಕರಾರು ಅವಧಿ ಮುಗಿದಿದ್ದರೂ ಅಂಗಡಿ ಖಾಲಿ ಮಾಡಿಲ್ಲ. ಮರು ಹರಾಜುಗೆ ಅವಕಾಶ ನೀಡದ ಕಾರಣ, ಪುರಸಭೆ ಆಸ್ತಿಯನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ ಎಂದು ಮುಖ್ಯಾಧಿಕಾರಿ ಕೆ.ಮಧುಕರ್ ತಿಳಿಸಿದ್ದಾರೆ.