ಮುಮ್ಮಡಿ-ನಾಲ್ವಡಿ ಟಿಪ್ಪು ಸುಲ್ತಾನ್…! ಸಚಿವ ಎಂ.ಬಿ. ಪಾಟೀಲ-ಶಾಸಕ ಯತ್ನಾಳ ನಡುವೆ ವಾಕ್ಸಮರ

M B Patil
Published on

ವಿಜಯಪುರ: ಸಿಎಂ ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಧ್ಯೆ ಬಿರುಸಿನ ವಾಕ್ಸಮರ ನಡೆದಿದೆ.

ಬಿಜೆಪಿ ಶಾಸಕ ಯತ್ನಾಳ ಮೂರನೇ ಟಿಪ್ಪು ಸುಲ್ತಾನ್ ಎಂದು ಸಚಿವ ಎಂ.ಬಿ. ಪಾಟೀಲ ತಿರುಗೇಟು ನೀಡಿದರೆ ಸಿಎಂ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳುವ ಎಂ.ಬಿ. ಪಾಟೀಲ ನಾಲ್ಕನೇ ಟಿಪ್ಪು ಸುಲ್ತಾನ್ ಎಂದು ಶಾಸಕ ಯತ್ನಾಳ ಮರು ಏಟು ನೀಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಶಾಸಕ ಯತ್ನಾಳ ಸಿದ್ದರಾಮಯ್ಯ ಅವರನ್ನು ಕುರಿತು ಎರಡನೇ ಟಿಪ್ಪು ಸುಲ್ತಾನ್ ಎಂದು ಬಣ್ಣಿಸಿದ್ದರು. ಈ ಬಗ್ಗೆ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ. ಪಾಟೀಲ, ಯತ್ನಾಳ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಭಾಗವಹಿಸಿರುವ ಫೋಟೊ ಇದೆ. ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ. ಹೀಗಾಗಿ ಅವರೇ ಮೂರನೇ ಟಿಪ್ಪು ಸುಲ್ತಾನ್ ಎಂದರು.

ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ವ್ಯಕ್ತಿ. ಆ ಇತಿಹಾಸ ಅಳಿಸಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ.ದೇಶದ ಸ್ವಾತಂತ್ರ್ಯ ಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೊಡುಗೆ ಏನೂ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಭಾಗವಹಿಸಿಲ್ಲ. ಇವರೆಲ್ಲರೂ ಬ್ರಿಟಿಷರ ಪರವಾಗಿ ಇದ್ದರು ಎಂಬುದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಿಳಿದು ಬರುತ್ತದೆ ಎಂದರು.

ಕಾಂಗ್ರೆಸ್ ಮಾತ್ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದೆ. ವೀರ ಮರಣವನ್ನಪ್ಪಿದವರಲ್ಲಿ ಹಿಂದು, ಮುಸ್ಲಿಂ, ಸಿಖ್‌ರೂ ಇದ್ದಾರೆ. ಆದರೆ ಇದೀಗ ಬಂದ ಬಿಜೆಪಿ, ಆರ್‌ಎಸ್‌ಎಸ್‌ನವರು ದೇಶ ಹಾಗೂ ಸ್ವಾತಂತ್ರ್ಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.

ಇನ್ನು ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಶಾಲೆ- ಕಾಲೇಜ್‌ಗಳಲ್ಲಿ ಜಾತಿ, ಧರ್ಮದ ವಿಷಯ ಬರಬಾರದು. ಹಿಜಾಬ್ ಗದ್ದಲ ಬರುವ ಮುಂಚೆ ಶಾಲೆ- ಕಾಲೇಜ್ ಹೇಗಿದ್ದವೋ ಹಾಗೆಯೇ ಇರಲಿ ಎಂದು ಆಶಿಸಿದರು.

ಎಂ.ಬಿ. ಪಾಟೀಲರ ಈ ಹೇಳಿಕೆಗೆ ಪ್ರತಿಯಾಗಿ ಯತ್ನಾಳ, ‘ಎಂ.ಬಿ.ಪಾಟೀಲರು ನಾಲ್ಕನೇ ಟಿಪ್ಪು ಎಂದು ಕಾಣುತ್ತದೆ’ ಎಂದರಲ್ಲದೇ, ಯಾವುದೇ ಶಾಲೆ-ಕಾಲೇಜಿನಲ್ಲಿ ತಮ್ಮ ಸಂಸ್ಥೆಯ ವಸ್ತ್ರಸಂಹಿತೆ ಕಾಪಾಡಿಕೊಳ್ಳಬೇಕೆಂಬ ಆದೇಶವಿದೆ. ಆದರೆ ಸಿದ್ದರಾಮಯ್ಯನವರು ಏನೋ ತುಷ್ಠೀಕರಣ ಮಾಡಲು ಹೋಗಿ ಸಿಕ್ಕಿಬಿದ್ರು. ಈಗ ಉಲ್ಟಾ ಹೊಡೆದಿದ್ದಾರೆ. ಇನ್ನಾದರೂ ರಾಜ್ಯದ ಸಿಎಂ ಆಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net