

ಮೈಸೂರು: ಮುಂಬೈ ಮೇಲೆ ಉಗ್ರರು ದಾಳಿ ನಡೆಸಿ 14 ವರ್ಷವಾದ ಹಿನ್ನೆಲೆಯಲ್ಲಿ ಯುವ ಭಾರತ್, ಟೀಂ ಮೈಸೂರು ಮತ್ತು ವೀರ ಸಾವರ್ಕರ್ ಯುವ ಬಳಗದಿಂದ ಶನಿವಾರ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ಹುತಾತ್ಮ ಯೋಧರನ್ನು ನೆನೆದು ಮೊಂಬತ್ತಿ ಹಚ್ಚಿ ಮೌನಾಚರಣೆ ನಡೆಸಲಾಯಿತು.
ಯುವ ಭಾರತ್ ಸಂಘಟನೆ ಅಧ್ಯಕ್ಷ ಜೋಗಿ ಮಂಜು ಮಾತನಾಡಿ, ಮುಂಬೈ ದಾಳಿ ಭಾರತೀಯರ ಪಾಲಿಗೆ ಅತ್ಯಂತ ಕರಾಳ ದಿನ. ಉಗ್ರರನ್ನು ಸದೆಬಡಿಯುವ ಸಂದರ್ಭ ನಮ್ಮ ನಾಡಿನ ಹೆಮ್ಮೆಯ ಪುತ್ರ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸೇರಿದಂತೆ 150ಕ್ಕೂ ಹೆಚ್ಚು ಯೋಧರು, ಪೊಲೀಸರು ಬಲಿಯಾದರು. 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ನಮ್ಮ ಇಂದಿನ ಸುಂದರ ಜೀವನ, ಸಂತೋಷಕ್ಕಾಗಿ ಬಲಿದಾನಗೈದ ವೀರ ಯೋಧರನ್ನು ಎಲ್ಲರು ಸ್ಮರಿಸಬೇಕು ಎಂದರು.
ಈ ಸಂದರ್ಭ ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್, ಟೀಂ ಮೈಸೂರು ಮುಖ್ಯ ಸಂಚಾಲಕ ಗೋಕುಲ್ ಗೋವರ್ಧನ್, ನಗರದ ನಿವಾಸಿಗಳಾದ ಸಂದೇಶ್, ಪ್ರಮೋದ್ ಗೌಡ, ಟಿ.ಎಸ್. ಅರುಣ್, ಎಸ್.ಎನ್. ರಾಜೇಶ್ ಹಾಗೂ ಇತರರು ಇದ್ದರು.