

ಉಡುಪಿ: ದಾಸ ಸಾಹಿತ್ಯದ ಮೂಲ ಪ್ರವರ್ತಕರಾದ ಶ್ರೀಪಾದರಾಜರ ಪರಂಪರೆಯ ಮಠದ ಶಾಖೆ ಜ.16ಕ್ಕೆ ಉಡುಪಿ ರಥಬೀದಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ಹೆಚ್ಚಿನ ಮಾಧ್ವ ಮಠಗಳು ಕೃಷ್ಣ ಮಠದ ರಥಬೀದಿಯಲ್ಲಿ ಶಾಖಾ ಮಠಗಳನ್ನು ಹೊಂದಿದ್ದು, ಪ್ರಮುಖವಾದ ಕೋಲಾರ ಜಿಲ್ಲೆಯ ಮುಳುಬಾಗಿಲು ಶ್ರೀಪಾದರಾಜರ ಮಠಕ್ಕೆ ಇಷ್ಟವರೆಗೆ ಜಾಗದ ಸಮಸ್ಯೆಯಿಂದ ಉಡುಪಿಯಲ್ಲಿ ಸ್ವಂತ ಕಟ್ಟಡವಿರಲಿಲ್ಲ. 2017ರಲ್ಲಿ ಶಾಖಾ ಮಠಕ್ಕೆ ಶಂಕುಸ್ಥಾಪನೆ ನೆರವೇರಿದ್ದು, ಇದೀಗ ಪೂರ್ಣಗೊಂಡು ಪುತ್ತಿಗೆ ಮಠದ ಪರ್ಯಾಯಕ್ಕೂ ಮುನ್ನ ಉದ್ಘಾಟನೆಗೆ ಸಜ್ಜಾಗಿದೆ. ಶ್ರೀ ಕೇಶವ ನಿಧಿ ಶ್ರೀಪಾದರ ಆರಾಧನೆ ದಿನ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದರು ಲೋಕಾರ್ಪಣೆಗೊಳಿಸಲಿದ್ದಾರೆ.
ಮೂರು ಅಂತಸ್ತಿನ ಕಟ್ಟಡ
ಶಾಖಾ ಮಠವು 3 ಅಂತಸ್ತು ಹೊಂದಿದ್ದು, 2.5 ಸಾವಿರ ಚದರಡಿ ವಿಸ್ತೀರ್ಣವಿದೆ. ಕೆಳಮಹಡಿಯಲ್ಲಿ ಸಭಾಭವನ, ಮೇಲಂತಸ್ತಿನಲ್ಲಿ 8 ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಭಾಭವನದಲ್ಲಿ ಶ್ರೀಗಳ ಪಟ್ಟದ ದೇವರಿಗೆ ಪೂಜೆ, ಪಾಠ, ಪ್ರವಚನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
60 ವರ್ಷಗಳ ಕಾನೂನು ಹೋರಾಟ
ಸೋದೆ ಮಠದ ಶ್ರೀವಾದಿರಾಜ ತೀರ್ಥರ ಕಾಲದಲ್ಲಿ ರಥಬೀದಿಯಲ್ಲಿ ಅಷ್ಟಮಠಗಳನ್ನು ನಿರ್ಮಿಸಲಾಗಿತ್ತು ಎಂಬುದಾಗಿ ಇತಿಹಾಸದಲ್ಲಿ ತಿಳಿದುಬರುತ್ತದೆ. ಇದೇ ಸಂದರ್ಭದಲ್ಲಿ ವಾದಿರಾಜರು ಟ್ಟದ ಮೇಲಿನ ಮಾಧ್ವ ಮಠಗಳಿಗೂ ಜಾಗವನ್ನು ನೀಡಿದ್ದರು. 1920ರಲ್ಲಿ ಉಡುಪಿಗೆ ಆಗಮಿಸಿದ್ದ ಮೇಧಾನಿಧಿ ತೀರ್ಥರಿಗೆ ಮುಳುಬಾಗಿಲಿನ ಮಠಕ್ಕೂ ಜಾಗವಿರುವ ಬಗ್ಗೆ ತಿಳಿದುಬಂದಿತ್ತು. ಇದರ ನಿರ್ವಹಣೆಯನ್ನು ಸ್ಥಳಿಯರೊಬ್ಬರಿಗೆ ವಹಿಸಿ ಅವರು ತೆರಳಿದ್ದರು. ನಂತರ 1950ರಲ್ಲಿ ಸತ್ಯನಿಧಿ ತೀರ್ಥರು ಶಾಖಾ ಮಠ ನಿರ್ಮಿಸಲು ಮುಂದಾದ ಸಂದರ್ಭದಲ್ಲಿ ವ್ಯಾಜ್ಯ ಉಂಟಾಗಿ 1954ರಲ್ಲಿ ಪ್ರಕರಣ ಕೋರ್ಟ್ ಮೆಟ್ಟಲೇರಿತ್ತು. 60 ವರ್ಷಗಳ ಸುದೀರ್ ಕಾನೂನು ಹೋರಾಟದ ಬಳಿಕ 2016ರಲ್ಲಿ ಪ್ರಸ್ತುತ ಇರುವ ಜಾಗ ಮಠದ ಸುಪರ್ದಿಗೆ ಬಂದಿತ್ತು.