

ಸಿದ್ದಾಪುರ: ಕಟ್ಟಡ ಕಾಮಗಾರಿ ಸಲಕರಣೆ, ಅಡಕೆ ಅಟ್ಟಕ್ಕೆ ಏರಿಸಿ-ಇಳಿಸುವುದು ಸೇರಿ ವಿವಿಧ ರೀತಿಯಲ್ಲಿ ಉಪಯೋಗಕ್ಕೆ ಬರುವಂತಹ ವಿನೂತನ ಉಪಕರಣವಾದ ಬಂಬೂ ಕ್ರೇನ್ ಅನ್ನು ಹಳ್ಳಿ ಹೈದನೊಬ್ಬ ಸಿದ್ಧಪಡಿಸಿದ್ದಾನೆ.
ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಮಳ್ಳಿಕೈನ ವೆಂಕಟಗಿರಿ ಹೆಗಡೆ ಉಪಕರಣ ಆವಿಷ್ಕಾರ ಮಾಡಿದವರು. ತಮ್ಮ ಮನೆಯ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಮೊದಲ ಅಂತಸ್ತಿಗೆ (ಮಹಡಿ) ತೆಗೆದುಕೊಂಡು ಹೋಗಲು ಮತ್ತು ಕೆಳಗಿಳಿಸಲು ಕಾರ್ಮಿಕರ ಸಮಸ್ಯೆ ಉಂಟಾಯಿತು. ಆಗ ತಾವೇ ಯೋಚಿಸಿ ಬಂಬೂ ಕ್ರೇನ್ ಸಿದ್ಧಪಡಿಸಿ ಕಟ್ಟಡ ಸಾಮಗ್ರಿಗಳನ್ನು ಮೇಲಕ್ಕೆ ಮತ್ತು ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಬೂ ಕ್ರೇನ್‌ಗೆ ಬೇಕಾಗುವ ಸಾಮಗ್ರಿ: ಕಟ್ಟಡ, ಅಡಕೆ ಅಟ್ಟ ಏರಲು ಎತ್ತರಕ್ಕೆ ತಕ್ಕಂತೆ ಎರಡು ಬಂಬೂ ಗಳಗಳು. ಕಟ್ಟಡದ ಬುಡದಲ್ಲಿ ಒಂದು ಅಡಿ ಗುಂಡಿ ತೋಡಿ ಒಂದು ಬಂಬೂ ನಿಲ್ಲಿಸುವುದು. ಕಟ್ಟಡದ ಎತ್ತರಕ್ಕೆ ಸರಿಯಾಗಿ ಮತ್ತೊಂದು ಬಂಬೂ ಕಟ್ಟಬೇಕು. ಕಟ್ಟಿದ ಗಳದ ತುದಿಗೆ ತಕ್ಕಡಿಯಂತೆ ಪ್ಲಾಸ್ಟಿಕ್ ಬಳ್ಳಿ ಕಟ್ಟಬೇಕು. ಗಳದ ಬುಡದಲ್ಲಿ ಎತ್ತರಕ್ಕೆ ತಕ್ಕಂತೆ ಉದ್ದದ ದಪ್ಪದ ಪ್ಲಾಸ್ಟಿಕ್ ಬಳ್ಳಿ (ಮೇಲಕ್ಕೆ ಏರಿಳಿಸಲು) ಇವಿಷ್ಟು ಇದ್ದರೆ ಬಂಬೂ ಕ್ರೇನ್ ಸಿದ್ಧ.
ಬಂಬೂ ಗಳವೇ ಸೂಕ್ತ: ಈ ವಿನೂತನ ಪ್ರಯೋಗಕ್ಕೆ ಬಂಬೂ ಗಳವೇ ಸೂಕ್ತ ಎನ್ನುತ್ತಾರೆ ವೆಂಕಟಗಿರಿ ಹೆಗಡೆ. ಏಕೆಂದರೆ ಬೇರೆ ಯಾವುದೇ ಜಾತಿ ಮರಗಳ ಗಳಗಳಾದರೆ ಅವು ಬಗ್ಗುತ್ತವೆ. ಭಾರ ತಡೆದುಕೊಳ್ಳುವುದಿಲ್ಲ. ಈ ಬಂಬೂ ಕ್ರೇನ್‌ನಿಂದ 45ರಿಂದ 50 ಕೆಜಿಯಷ್ಟು ಭಾರವುಳ್ಳ ವಸ್ತುಗಳನ್ನು ಮೇಲೆ ಕಳುಹಿಸಬಹುದು ಹಾಗೂ ಕೆಳಗೆ ಇಳಿಸಬಹುದಾಗಿದೆ.
ಈ ಕೆಲಸಕ್ಕೆ ಕಟ್ಟಡದ ಮೇಲೊಬ್ಬರು ಹಾಗೂ ಕೆಳಗೆ ಒಬ್ಬರು. ಇಬ್ಬರು ಕೂಲಿಯಾಳುಗಳಿದ್ದರೆ ಸಾಕು. ಇದರಿಂದ ಸಮಯದ ಉಳಿತಾಯ, ಕಡಿಮೆ ಶ್ರಮ, ಖರ್ಚು ಕಡಿಮೆ. ಇನ್ನು ಗ್ರಾಮೀಣ ಭಾಗದಲ್ಲಿ ಅಡಕೆ ಅಟ್ಟಕ್ಕೆ ಏರಿಸಲು, ಇಳಿಸಲು, ವಾಹನಗಳಿಗೆ ಕರಡ, ಬಿಳೆಹುಲ್ಲು ತುಂಬಲು, ಸಣ್ಣ ಸಣ್ಣ ಕೆರೆಯ ಹೂಳು ತೆಗೆಯಲು ಈ ಬಂಬೂ ಕ್ರೇನ್ ಹೆಚ್ಚು ಅನುಕೂಲ ಆಗುತ್ತದೆ ಎನ್ನುತ್ತಾರೆ ವೆಂಕಟಗಿರಿ ಹೆಗಡೆ.
ಇಂದು ಎಲ್ಲಿ ನೋಡಿದರೂ ಯಂತ್ರೋ ಪಕರಣಗಳ ಸದ್ದು. ಆದರೆ, ಯಾವುದೇ ಆಡಂಬರ, ಖರ್ಚು ಇಲ್ಲದ ವಿನೂತನ ಪ್ರಯೋಗ ಮಾಡಬೇಕು ಎಂದು ಕಳೆದ ಒಂದು ವರ್ಷದಿಂದ ಯೋಚಿಸುತ್ತಿದ್ದೆ. ಅದನ್ನು ಪ್ರಾಯೋಗಿಕವಾಗಿ ಮಾಡಿದ್ದೇನೆ. ಬಂಬೂ ಕ್ರೇನ್‌ನಿಂದ ನನಗೆ ಉಪಯೋಗವಾಗಿದೆ. ವೆಂಕಟಗಿರಿ ಹೆಗಡೆ, ಬಂಬೂ ಕ್ರೇನ್ ರೂವಾರಿ ಈ ರೀತಿ ವಿನೂತನ ಪ್ರಯೋಗಗಳನ್ನು ಮಾಡುವುದರಿಂದ ರೈತರು ಎದುರಿಸುತ್ತಿರುವ ಕೂಲಿಕಾರರ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ದೂರ ಮಾಡಲು ಸಾಧ್ಯವಾಗುತ್ತದೆ. ಗಣೇಶ ಗೌಡ, ಪದ್ಮನಗದ್ದೆ ರೈತ