ಫೆ.14ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

CAN_7212
Published on

ಮೈಸೂರು: ಈ ಬಾರಿಯ ರಂಗಹಬ್ಬ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2020’ ಫೆ.14ರಿಂದ 19ರವರೆಗೆ ರಂಗಾಯಣ ಅಂಗಳದಲ್ಲಿ ನಡೆಯಲಿದೆ. ಒಂದು ದಿನದ ಮುಂಚಿತವಾಗಿಯೇ ಫೆ.13 ರಂದು ಜನಪದ ಉತ್ಸವ ಪ್ರಾರಂಭಗೊಳ್ಳಲಿದೆ.

ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ ‘ಗಾಂಧಿ ಪಥ’ ಆಶಯದೊಂದಿಗೆ ಈ ಸಾಲಿನ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಧುನಿಕ ರಂಗಭೂಮಿಯಲ್ಲಿ ನಾಡಿನಲ್ಲಿ ಅಲ್ಲದೇ ಹೊರನಾಡಿನಲ್ಲೂ ತನ್ನ ಛಾಪನ್ನು ಮೂಡಿಸಿರುವ ರಂಗಾಯಣದ ಬಹುಮುಖ್ಯ ಉತ್ಸವ ‘ಬಹುರೂಪಿ’. ನಮ್ಮ ಸಂಸ್ಕೃತಿ ಮತ್ತು ಕಲೆಗಳನ್ನು ಮುಖಾಮುಖಿಯಾಗಿಸುವ, ಬಹುಕಲಾರೂಪಗಳನ್ನು ಒಂದು ವಾರದವರೆಗೆ ದರ್ಶನಗೊಳಿಸುವುದೇ ‘ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ-2020’ ಉದ್ದೇಶವಾಗಿದೆ.

ಆರು ದಿನಗಳವರೆಗೆ ನಡೆಯುವ ಉತ್ಸವದಲ್ಲಿ ಕನ್ನಡದ 13 ಹಾಗೂ ಭಾರತದ ವಿವಿಧ ಭಾಷೆಯ 11ಸೇರಿ ಒಟ್ಟು 24 ನಾಟಕಗಳು ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ಅಂತಾರಾಷ್ಟ್ರಿಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಕರಕುಶಲ ವಸ್ತುಗಳು, ಪುಸ್ತಕ ಪ್ರದರ್ಶನ, ಜನಪದೋತ್ಸವ, ದೇಸಿ ಆಹಾರ ಮಳಿಗೆ ಹೀಗೆ ಹತ್ತು ಹಲವು ದೇಶಿ, ಕಲೆ-ಸಂಸ್ಕೃತಿ, ಸಂಗತಿಗಳು ಅನಾವರಣಗೊಳ್ಳಲಿವೆ ಎಂದರು.

‘ಗಾಂಧಿ ಪಥ’ ಆಶಯಕ್ಕೆ ಪೂರಕವಾಗುವ ನಮ್ಮ ಹಿರಿಯ ರೆಪರ್ಟರಿ ಕಲಾವಿದರ ‘ಗಾಂಧಿ ವರ್ಸಸ್ ಗಾಂಧಿ’ ನಾಟಕ, ಮೈಸೂರು ಹವ್ಯಾಸಿ ಕಲಾವಿದರಿಂದ ‘ಮಹಾತ್ಮ’ ನಾಟಕವನ್ನು ಹವ್ಯಾಸಿ ನಿರ್ದೇಶಕರಿಂದಲೇ ರಂಗಾಯಣವೇ ಸಿದ್ಧಪಡಿಸುತ್ತಿದೆ. ಗಾಂಧಿ ಲಾವಣಿ, ಭಜನೆಗಳು, ತತ್ವಪದ ಗಾಯನ, ಭಿತ್ತಿಚಿತ್ರ ಪ್ರದರ್ಶನ, ಚಲನಚಿತ್ರೋತ್ಸವ ಎಲ್ಲವೂ ಬಹುರೂಪಿಯಲ್ಲಿ ರಿಂಗಿಣಿಸಲಿದೆ ಎಂದರು.

ಎಡರು ದಿನ ವಿಚಾರ ಸಂಕಿರಣ: ವಿಚಾರ ಸಂಕಿರಣದ ಸಂಚಾಲಕ ರಾಮನಾಥ್ ಮಾತನಾಡಿ, ಫೆ.16 ಮತ್ತು 17 ರಂದು ಗಾಂಧಿ ಪಥ ಶೀರ್ಷಿಕೆಯಡಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಫೆ.16 ರಂದು ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣದ ಉದ್ಘಾಟನೆಯನ್ನು ಖ್ಯಾತ ಕವಿ ಸಿದ್ಧಲಿಂಗಯ್ಯ ನೆರವೇರಿಸಲಿದ್ದಾರೆ. ಗೋಷ್ಠಿಯಲ್ಲಿ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ ಎಂದರು.

ಚಲನಚಿತ್ರೋತ್ಸವದ ಸಂಚಾಲಕ ಪ್ರಶಾಂತ್ ಹಿರೇಮಠ್ ಮಾತನಾಡಿ, ಗಾಂಧಿಪಥ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 7 ಚಲನಚಿತ್ರಗಳು ಹಾಗೂ 10 ಸಾಕ್ಷೃಚಿತ್ರಗಳನ್ನು ಪ್ರದರ್ಶಿಸಲು ಸಿದ್ಧತೆ ನಡೆಸಲಾಗುತ್ತಿದೆ. ಗಾಂಧೀಜಿಯವರ ಜೀವನಾಧಾರಿತ ಶ್ರೇಷ್ಠ ಚಲನಚಿತ್ರಗಳು ಹಾಗೂ ಅಪರೂಪದ ಘಟನೆಗಳನ್ನೊಳಗೊಂಡ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಕ್ಷೃಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು.

ಜಾನಪದ ವಿಭಾಗದ ಸಂಚಾಲಕಿ ಗೀತಾ ಮೋಂಟಡ್ಕ ಮಾತನಾಡಿ, ಈ ಬಾರಿ ಯಕ್ಷಗಾನ ಅಕಾಡೆಮಿ, ಬಯಲಾಟ, ಕೊಡವ, ಅರೆಭಾಷೆ, ಬ್ಯಾರಿ, ಕೊಂಕಣಿ, ತುಳು ಅಕಾಡೆಮಿಗಳ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೆ ರಾಜ್ಯದ ಅನೇಕ ಸ್ಥಳೀಯ ಜಾನಪದ ಕಲೆಗಳು, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದಿಂದಲೂ ತಂಡಗಳು ಆಗಮಿಸಲಿವೆ ಎಂದರು.

ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಇದ್ದರು.

ಅನಂತ್‌ನಾಗ್ ಉದ್ಘಾಟನೆ: 14 ರಂದು ಸಂಜೆ 5.30ಕ್ಕೆ ವನರಂಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉತ್ಸವಕ್ಕೆ ಹಿರಿಯ ಕಲಾವಿದ ಅನಂತ್‌ನಾಗ್ ಚಾಲನೆ ನೀಡಲಿದ್ದಾರೆ ಎಂದು ಬಹುರೂಪಿ ಸಂಚಾಲಕ ಹುಲಗಪ್ಪ ಕಟ್ಟಿಮನಿ ತಿಳಿಸಿದರು.

ಉತ್ಸವದ ಪರಿಚಯ ಪುಸ್ತಕವನ್ನು ಸಚಿವ ಸಿ.ಟಿ.ರವಿ ಬಿಡುಗಡೆ ಮಾಡಲಿದ್ದಾರೆ. ಬಹುರೂಪಿಯ ಪುಸ್ತಕ ಮೇಳ ಮತ್ತು ಕರಕುಶಲ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ. ಶಾಸಕ ಎಲ್ ನಾಗೇಂದ್ರ ಭಾಗವಹಿಸಲಿದ್ದಾರೆ. ಇದೇ ವೇಳೆ ನಾಡಿನ ಸುಪ್ರಸಿದ್ಧ ಗಾಯಕಿ ವಿದುಷಿ ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ಮೀರಾ ಭಜನ್ ಗಾಯನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಾಯೋಜಿತ ದೊಡ್ಡಾಟ ಪ್ರದರ್ಶನಗೊಳ್ಳಲಿದೆ ಎಂದರು.

ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬಹುರೂಪಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಫೆ.13 ರಂದು ಸಂಜೆ 5 ಗಂಟೆಗೆ ಕಿಂದರಿಜೋಗಿ ವೇದಿಕೆಯಲ್ಲಿ ಜಾನಪದ ಕಾರ್ಯಕ್ರಮಗಳಿಗೆ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಚಾಲನೆ ನೀಡಲಿದ್ದಾರೆ. ಇಬ್ರಾಹಿಂ ಸುತಾರ್ ಭಾಗವಹಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net