28,576 ವಿದ್ಯಾರ್ಥಿಗಳಿಂದ ಬಹುಶಿಸ್ತೀಯ ಕಲಿಕೆ

NEP
ಜುನ್ನಾ ರಾಮ್
Published on

ಧಾರವಾಡ: ಕೇಂದ್ರ ಸರ್ಕಾರ ದೇಶಾದ್ಯಂತ ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯ ಮತ್ತು ಸಿಬಿಎಸ್‌ಇ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಜು. 29ಕ್ಕೆ 3 ವರ್ಷ ತುಂಬುತ್ತಿವೆ. ಈ ಮೂಲಕ ಜಿಲ್ಲೆಯ ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯ ಮತ್ತು ಸಿಬಿಎಸ್‌ಇ ಸೇರಿ 35 ಶಾಲೆಗಳ ಸುಮಾರು 28,576 ಮಕ್ಕಳು ಎನ್‌ಇಪಿ ಅಡಿ ಬಹುಶಿಸ್ತೀಯ ಮತ್ತು ಕೌಶಲ ಆಧಾರಿತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಧಾರವಾಡ ಕೇಂದ್ರೀಯ ವಿದ್ಯಾಲಯದ ಉಪ ಪ್ರಾಚಾರ್ಯ ಜುನ್ನಾ ರಾಮ್ ಹೇಳಿದರು.

ನಗರದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎನ್‌ಇಪಿಯಲ್ಲಿ ಮೌಖಿಕ ಕಲಿಕೆಗಿಂತ ವಿಮರ್ಶಾತ್ಮಾಕ ಚಿಂತನೆಯನ್ನು ಉತ್ತೇಜಿಸಿ ಅಧ್ಯಯನದ ಬದಲಿಗೆ ವಿದ್ಯಾರ್ಥಿಗಳು ಕಲಿಕೆಯತ್ತ ಗಮನ ಹರಿಸಿ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಅನುವು ಆಗುವಂತೆ ವಿಷಯ ಪ್ರಸ್ತುತಿ ಮಾಡಲಾಗುತ್ತಿದೆ. ಸ್ಥಳೀಯ ಕಲೆ, ಕೌಶಲ ಮತ್ತು ಉದ್ಯೋಗಗಳಿಗೆ ಪೂರಕವಾದ ವಾತಾವರಣವನ್ನು ಮಕ್ಕಳಲ್ಲಿ ಬಾಲ್ಯದಲ್ಲೇ ಬೆಳೆಸಲು ಎನ್‌ಇಪಿ ಆದ್ಯತೆ ನೀಡಿದೆ ಎಂದರು.

ಕೇಂದ್ರೀಯ ವಿದ್ಯಾಲಯಗಳಲ್ಲಿ ಬಾಲವಾಟಿಕಾ 1ರಿಂದ 3ರವರೆಗೆ ಕಲಿಯುವ ಮಕ್ಕಳಲ್ಲಿ ಮೂಲ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಬೆಳೆಸಲು, ಸಂವಹನ ಕಲೆಯನ್ನು ಬೆಳೆಸಲು ಕ್ರಮ ವಹಿಸಲಾಗಿದೆ. ಪೋಷಕರೂ ತಮ್ಮ ಜ್ಞಾನವನ್ನು ಮಕ್ಕಳಿಗೆ ಶಾಲಾ ಅವಧಿಯಲ್ಲಿ ಕಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯೆ ಹೇಮಲತಾ ಯು., ಉಪ ಪ್ರಾಚಾರ್ಯ ಸ್ಯಾಮುಯಲ್ ನವನೀತರಾಜ್, ಹುಬ್ಬಳ್ಳಿ ರಾಜನಗರದ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ರವಿರಾಜೇಶ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಜಿ.ಎನ್. ಮಠಪತಿ, ಎಸ್.ಎಂ. ಹುಡೇದಮನಿ, ಜೆ.ಎಸ್.ಎಸ್. ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯೆ ಸಾಧನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net