8 ರಿಂದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ

6 - Copy
Published on

ಮೈಸೂರು: ರಂಗಾಯಣದಿಂದ ‘ಭಾರತೀಯತೆ’ ಶೀರ್ಷಿಕೆಯಡಿ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ವನ್ನು ಡಿ.8ರಿಂದ 15ರವರೆಗೆ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ರಂಗಾಯಣದ ಅಂಗಳದಲ್ಲಿ 7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕಗಳು, ಕರ್ನಾಟಕದ 12 ಕನ್ನಡದ ನಾಟಕಗಳು ಮತ್ತು ತುಳು ನಾಟಕ ಸೇರಿ ಒಟ್ಟು 20 ನಾಟಕಗಳು ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಕೇವಲ ನಾಟಕಗಳ ಪ್ರದರ್ಶನದ ಹಬ್ಬವಲ್ಲ. ಸಮಾಜಕ್ಕೆ ಕನ್ನಡಿ ಹಿಡಿಯುವ ವಸ್ತುವಿಷಯದ ಆಧಾರದಲ್ಲಿ ನಡೆಯುತ್ತದೆ. ರಂಗಾಯಣ ಮೈಸೂರು ಅತ್ಯಂತ ಗಂಭೀರವಾಗಿ ಚರ್ಚಿಸಿ, ಈ ಬಾರಿ ‘ಭಾರತೀಯತೆ’ ಎಂಬ ವಸ್ತುವಿಷಯವನ್ನು ಆಯ್ಕೆ ಮಾಡಿದೆ. ಭಾರತವೆಂದರೆ ಇದು ಕೇವಲ ನೆಲವೊಂದೇ ಅಲ್ಲ, ಇದನ್ನು ‘ಮಾತೆ’ ಎಂದು ಪೂಜಿಸುತ್ತೇವೆ. ಇದು ನಮ್ಮ ವ್ಯಕ್ತಿತ್ವದ ಹೆಗ್ಗುರುತು. ಇಲ್ಲಿರುವ ದೊಡ್ಡ ಜನಸಂಖ್ಯೆಯೇ ನಮ್ಮ ಅತಿದೊಡ್ಡ ಸಂಪನ್ಮೂಲ. ಅನೇಕ ಭಾಷೆ, ಧರ್ಮ, ಜಾತಿ ಜನಾಂಗಗಳ ಏಕ ಸಮೂಹವೇ ಭಾರತ ಎಂದರು.

ನಾಟಕಗಳ ಜತೆಗೆ ಜಾನಪದ ಕಲಾಪ್ರದರ್ಶನ, ರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತುಪ್ರದರ್ಶನ, ದೇಸಿ ಆಹಾರ ಮೇಳ ಮತ್ತು ಪ್ರಾತ್ಯಕ್ಷಿಕೆಗಳು, ಚಿತ್ರಕಲಾ ಶಿಬಿರ ಮುಂತಾದ ಹಲವು ಹತ್ತು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸಿಎಂರಿಂದ ಉದ್ಘಾಟನೆ: ಡಿ.10ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಅಧ್ಯಕ್ಷ ಪರೇಶ್ ರಾವಲ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್, ಮೇಯರ್ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಡಿ.8ರಂದು ಜಾನಪದ ಉತ್ಸವಕ್ಕೆ ವನರಂಗದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಡಿ.9ರಂದು ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಗುವುದು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ಹಿರಿಯ ನಟ ದೊಡ್ಡಣ್ಣ ಭಾಗವಹಿಸಲಿದ್ದಾರೆ. ಶ್ರೀರಂಗ ವೇದಿಕೆಗೆ ಡಾ.ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣ ಮಾಡಲಾಗಿದೆ ಎಂದರು.
ಡಿ.10 ಮತ್ತು 11ರಂದು ಸನಾತನ ಧರ್ಮ ಮತ್ತು ಭಾರತೀಯತೆ ಭವಿಷ್ಯದಲ್ಲಿ ಭಾರತೀಯ ಸಂಸ್ಕೃತಿ ವಿಚಾರಗಳ ಮೇಲೆ ಚರ್ಚೆ ನಡೆಯಲಿದೆ. ಪದವಿ ವಿದ್ಯಾರ್ಥಿಗಳಿಗೆ ವೈವಿಧ್ಯತೆಯಲ್ಲಿ ಭಾರತೀಯತೆ ವಿಷಯದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ವಿಚಾರ ಸಂಕಿರಣದಲ್ಲಿ ಲೇಖಕಿ ಡಾ.ಎಸ್.ಆರ್.ಲೀಲಾ, ನಾಟಕಕಾರ ಎಸ್.ಎನ್.ಸೇತುರಾಮ್, ವಾಗ್ಮಿ ಡಾ.ಬಿ.ವಿ.ಆರತಿ, ರಮಾನಂದ ಐನಕೈ, ಸಾಹಿತಿ ಬಾಬು ಕೃಷ್ಣಮೂರ್ತಿ, ಸಂಸ್ಕೃತಿ ಚಿಂತಕ ಸು.ರಾಮಣ್ಣ ಭಾಗವಹಿಸಲಿದ್ದಾರೆ ಎಂದರು.
ಉತ್ಸವಕ್ಕೂ ಮುನ್ನ ಡಿ.3ರಂದು ಚಿತ್ರಕಲಾ ಶಿಬಿರ ನಡೆಯಲಿದೆ. ಡಿ.5ರಂದು ಮನೆ ಮನೆಗೆ ರಂಗಾಯಣ- ಮನ ಮನಕೆ ಬಹುರೂಪಿ ಪ್ರಚಾರಾಂದೋಲನ ಉದ್ಘಾಟನೆಯಾಗಲಿದೆ ಎಂದರು.
ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಬಹುರೂಪಿ ಸಂಚಾಲಕ ಜಗದೀಶ್ ಮನವಾರ್ತೆ ಇತರರಿದ್ದರು. ಇದೇ ವೇಳೆ ಬಹುರೂಪಿ ನಾಟಕೋತ್ಸವದ ಟಿಕೆಟ್ ಮಾರಾಟಕ್ಕೆ ಚಾಲನೆ ನೀಡಲಾಯಿತು. ಅಮೆರಿಕದ ಜಯಂತ್ ಟಿಪ್ಪು ನಿಜ ಕನಸುಗಳು ನಾಟಕದ ಮೂರು ಟಿಕೆಟ್ ಖರೀದಿಸಿದರು.

ವನರಂಗದಲ್ಲಿ ಜನಪದೋತ್ಸವ
ಡಿ.8ರಿಂದ 15ರವರೆಗೆ ವನರಂಗದಲ್ಲಿ ಬಹುರೂಪಿ ಜನಪದೋತ್ಸವ ನಡೆಯಲಿದೆ. ಡಿ 8ರಂದು ನಂಜನಗೂಡಿನ ಮಹದೇವ್ ಮತ್ತು ತಂಡದಿಂದ ಕಂಸಾಳೆ, ಕೆರೆ ಮನೆ ಶಿವಾನಂದ ಹೆಗಡೆ, ಇಡಗುಂಜಿ ಮೇಳದಿಂದ ಯಕ್ಷಗಾನ, ಡಿ.9ರಂದು ಡಾ.ಮನೋನ್ಮಣಿ ಮತ್ತು ತಂಡದಿಂದ ಸಂಪ್ರದಾಯದ ಹಾಡು, ಮಂಡ್ಯ ಸವಿತಾ ಚಿರಕುನ್ನಯ್ಯ ಪೂಜಾ ಕುಣಿತ, ಡಿ. 10ರಂದು ಮೈಸೂರಿನ ಸುಂದರೇಶ್ ಮತ್ತು ತಂಡದಿಂದ ಡೊಳ್ಳು ಕುಣಿತ, ಯದುಕುಮಾರ್ ಮತ್ತು ತಂಡದಿಂದ ನಾದಸ್ವರ.
ಡಿ.11ರಂದು ಚಾಮರಾಜನಗರದ ಶಿವಮಲ್ಲೇಗೌಡ ತಂಡದಿಂದ ಗೊರವರ ನೃತ್ಯ, ಚಿಕ್ಕಮಗಳೂರಿನ ರಂಗನಾಥ ಮತ್ತು ತಂಡದಿಂದ ಸೋಮನ ಕುಣಿತ, ಉಡುಪಿಯ ಶ್ರೀರಾಮ ಜನಪದ ಕಲಾ ತಂಡದಿಂದ ಕರಗ ಕೋಲಾಟ, ಡಿ.13ರಂದು ದಕ್ಷಿಣ ಕನ್ನಡದ ಮಂಜುನಾಥ ಮತ್ತು ತಂಡದಿಂದ ಕಂಗೀಲು, ಡಾ.ಮಳವಳ್ಳಿ ಮಹದೇವಸ್ವಾಮಿ ಅವರಿಂದ ಮಂಟೇಸ್ವಾಮಿ ಹಾಡು.
ಡಿ.14ರಂದು ಹಾಸನದ ಓಂಕಾರ್ ಮೂರ್ತಿ ತಂಡದಿಂದ ಚಿಟ್ ಮೇಳ, ಶುಭಾ ರಾಘವೇಂದ್ರ ತಂಡದಿಂದ ಜಾನಪದ ಗೀತೆ, ಡಿ.15ರಂದು ಕೆ.ಎನ್.ಮಹೇಶ್ ಅವರಿಂದ ವೀರಗಾಸೆ, ಕೊಡಗಿನ ಸೂರಜ್ ಮತ್ತು ತಂಡದಿಂದ ಬೊಳಕಾಟ್ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net