ಬಹುಗ್ರಾಮ ನೀರಿನ ಯೋಜನೆ ವರ್ಷದಲ್ಲಿ ಪೂರ್ಣ: ಗೋಪಾಲಕೃಷ್ಣ ಬೇಳೂರು

15hos1p hosanagara
ಹೊಸನಗರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಚಿವ ಮಧು ಬಂಗಾರಪ್ಪ ಶಿಲಾನ್ಯಾಸ ನೆರವೇರಿಸಿದರು. ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ, ಆರ್.ಎಂ.ಮಂಜುನಾಥ ಗೌಡ, ರಶ್ಮಿ, ಹಾಲಗದ್ದೆ ಉಮೇಶ್ ಇತರರಿದ್ದರು.
Published on

ಹೊಸನಗರ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರತಿಯೊಂದು ಮನೆಗೂ ತಲುಪಬೇಕು. ಪಟ್ಟಣ ಸೇರಿ ಬಹುಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಕೆಲಸ ನಡೆಯಲಿದೆ. ಮುಂದಿನ ವರ್ಷ ಈ ಯೋಜನೆ ಪೂರ್ಣವಾಗಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಶುಕ್ರವಾರ ಪಟ್ಟಣ ಒಳಗೊಂಡಂತೆ ನಗರ ಮತ್ತು ಇತರೆ 1,166 ಜನವಸತಿಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಲೆನಾಡಿನಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದ್ದು ಈಗಾಗಲೇ ನೀರಿನ ಸಮಸ್ಯೆ ಉಂಟಾಗಿದೆ. ಸಾರ್ವಜನಿಕರೂ ನೀರನ್ನು ಮಿತವಾಗಿ ಬಳಸಿ ಸಮಸ್ಯೆ ನಿವಾರಣೆಗೆ ಸಹಕರಿಸಬೇಕು. ಪಟ್ಟಣಕ್ಕೆ ಬೇಕಾದ ಅಗತ್ಯ ಕಟ್ಟಡಗಳ ಜತೆ ಹಲವು ಸೌಲಭ್ಯಗಳನ್ನು ನನ್ನ ಹಿಂದಿನ ಅವಧಿಯಲ್ಲಿ ಪೂರ್ಣಗೊಳಿಸಿದ್ದೇನೆ. ಈ ಅವಧಿಯಲ್ಲಿ ಕ್ಷೇತ್ರದ ಚಿತ್ರಣವನ್ನೇ ಬದಲಿಸುವ ಕೆಲಸ ಮಾಡಲಿದ್ದೇನೆ ಎಂದು ತಿಳಿಸಿದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ, ಕ್ಷೇತ್ರಕ್ಕೆ ಅನುದಾನ ತರುವಲ್ಲಿ ಗೋಪಾಲಕೃಷ್ಣ ಬೇಳೂರು ಅತ್ಯಂತ ನಿಪುಣರು. ಈಗಾಗಲೇ ಕ್ಷೇತ್ರಕ್ಕೆ ಬಹಳಷ್ಟು ಅನುದಾನ ತಂದಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉತ್ತಮವಾಗಿದೆ. ನೀರಿನ ಮಿತ ಬಳಕೆಯಲ್ಲಿ ಸರ್ಕಾರ ಆಸಕ್ತಿ ತೋರಿದರೆ ಸಾಲದು, ಜನರೂ ಇದಕ್ಕೆ ಸಹಕರಿಸಬೇಕು. ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಮನೆಯನ್ನು ಬೆಳಗಿಸಿದೆ. ಸಾಗರಕ್ಕೆ 40 ಬಸ್‌ಗಳ ಅಗತ್ಯವಿದ್ದು, ಅದನ್ನು ಶೀಘ್ರ ಒದಗಿಸಲಾಗುವುದು ಎಂದರು.

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ತಹಸೀಲ್ದಾರ್ ಎಚ್.ಜೆ.ರಶ್ಮಿ, ಪಪಂ ಸದಸ್ಯರಾದ ಹಾಲಗದ್ದೆ ಉಮೇಶ್, ಗುಲಾಬಿ ಮರಿಯಪ್ಪ, ಸಿಂಥಿಯಾ ಶೆರಾವೊ, ಶಾಹಿನಾ ನಾಸಿರ್ ಗುರುರಾಜ್, ಕೃಷ್ಣವೇಣಿ, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

ಬಹಳಷ್ಟು ಹಣವನ್ನು ಖರ್ಚು ಮಾಡಿ ನೀರಿನ ಯೋಜನೆಗಳನ್ನು ಮಾಡಿದರೂ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿರಲಿಲ್ಲ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾಡಿದ ಬಹುಗ್ರಾಮ ಯೋಜನೆ ಅತ್ಯಂತ ಸಮರ್ಪಕವಾಗಿದ್ದು, ಮಲೆನಾಡ ಜನರಿಗೆ ವರದಾನವಾಗಲಿದೆ.ಆರಗ ಜ್ಞಾನೇಂದ್ರ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net