ಶೀಘ್ರದಲ್ಲೇ ಗಾಂಧಿ ಬಜಾರ್‌ನ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಸೇವೆ ಆರಂಭ:ಮಹೇಶ್ವರ್‌ರಾವ್ ಹೇಳಿಕೆ

mahesh
Published on

ಬೆಂಗಳೂರು: ಗಾಂಧಿ ಬಜಾರ್‌ನಲ್ಲಿ ನಿರ್ಮಿಸಿರುವ ‘ಮಲ್ಟಿಲೆವೆಲ್ ಕಾರು ಪಾರ್ಕಿಂಗ್’ ಕಾಮಗಾರಿ ಮುಗಿದಿರುವ ಹಿನ್ನೆಲೆಯಲ್ಲಿ ಇದನ್ನು ಸಾರ್ವಜನಿಕ ಸೇವೆಗೆ ಒದಗಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದಕ್ಷಿಣ ವಲಯ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸ್ಮಾಟ್ ಸಿಟಿ ಸಂಸ್ಥೆ, ಗಾಂಧಿ ಬಜಾರ್‌ನಲ್ಲಿ ನಡೆಸುತ್ತಿದ್ದ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿ ಪೂರ್ಣಗೊಳಿಸಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ದಿನಾಂಕ ನಿಗದಿಪಡಿಸಿ ಕಟ್ಟಡವನ್ನು ಲೋಕಾರ್ಪಣೆ ಮಾಡಬೇಕು. ಈ ಮೂಲಕ ಸಾರ್ವಜನಿಕ ಸೇವೆಗೆ ಸಮರ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಬಹುಮಹಡಿ ಕಟ್ಟಡವನ್ನು 22 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ತಳ ಮಹಡಿ ಮತ್ತು ನೆಲ ಮಹಡಿಯಲ್ಲಿ ವ್ಯಾಪಾರಕ್ಕಾಗಿ 50 ಮಳಿಗೆಗಳನ್ನು ನಿರ್ಮಿಸಲಾಗಿದೆ. 1ನೇ ಮಹಡಿಯಿಂದ 4ನೇ ಮಹಡಿವರೆಗೆ ಕಾರುಗಳ ನಿಲುಗಡೆ (ಒಂದು ಮಹಡಿಯಲ್ಲಿ 31 ವಾಹನ) ವ್ಯವಸ್ಥೆ ಮಾಡಲಾಗಿದೆ. ಒಟ್ಟು 124 ವಾಹನಗಳ ನಿಲುಗಡೆ ಮಾಡಬಹುದು. ಒಂದು ಲಿಫ್ಟ್​​​​, 6 ಶೌಚಗೃಹ, ಸ್ಟೆಪ್ಸ್ ಮತ್ತು ಮೇಲ್ಛಾವಣಿಯಲ್ಲಿ ಟೆನ್ಸೆಲ್ ರೂಫಿಂಗ್ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂದು ಮಹೇಶ್ವರ್ ರಾವ್ ಮಾಹಿತಿ ನೀಡಿದರು.

ಬನಶಂಕರಿ ವೃತ್ತದಲ್ಲಿ ಬಸ್ ನಿಲ್ದಾಣದ ಮುಂಭಾಗ ಬಿಎಂಆರ್‌ಸಿಎಲ್ ವಾಹನಗಳ ಪಾರ್ಕಿಂಗ್ ಸ್ಥಳ ಮತ್ತು ಅದೇ ಸ್ಥಳದಲ್ಲಿರುವ ಖಾಲಿ ಜಾಗ ಪರಿಶೀಲಿಸಿ, ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಸ್ಥಳ ವ್ಯವಸ್ಥೆಗೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ವಲಯ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಸ್ನೇಹಲ್, ಜಂಟಿ ಆಯುಕ್ತರಾದ ಡಾ.ಮಧು, ಉಪ ಆಯುಕ್ತೆ ಲಕ್ಷ್ಮಿದೇವಿ, ಮುಖ್ಯ ಅಭಿಯಂತರಾದ ಬಸವರಾಜ್ ಕಬಾಡೆ, ಲೋಕೇಶ್, ಅಧೀಕ್ಷಕ ಅಭಿಯಂತರ ಹೇಮಲತಾ ಸೇರಿ ಮತ್ತಿತರರಿದ್ದರು.

ಗಾಂಧಿ ಬಜಾರ್ ರಸ್ತೆ ಪರಿಶೀಲನೆ: ಗಾಂಧಿ ಬಜಾರ್ ಮುಖ್ಯ ರಸ್ತೆಯ ಪ್ರವೇಶ, ಗಾಂಧಿ ಬಜಾರ್ ವೃತ್ತದಲ್ಲಿ ಅಳವಡಿಸಿರುವ ಗ್ರಾನೈಟ್ ಕಾಬುಲ್ ಸ್ಟೋನ್, ಪಾದಚಾರಿ ಮಾರ್ಗದಲ್ಲಿ ಬೊಲಾರ್ಡ್ಸ್ ಮತ್ತು ವೈಟ್ ಟಾಪಿಂಗ್ ಕಾಮಗಾರಿ ಪರಿಶೀಲಿಸಿದ ಮಹೇಶ್ವರ್‌ರಾವ್, ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಗಾಂಧಿ ಬಜಾರ್ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಈಗಾಗಲೇ ಗಡಿ ನಿಗದಿಪಡಿಸಲಾಗಿದೆ, ಆ ಗಡಿಯಲ್ಲೇ ವ್ಯಾಪಾರಕ್ಕೆ ಅವಕಾಶ ಮಾಡಬೇಕು. ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರ ಮೇಲೆ ಕ್ರಮವಾಗಬೇಕು. ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆ ತಡೆಯಬೇಕು ಎಂದರು. ಪ್ರಮುಖವಾಗಿ ಮಾರುಕಟ್ಟೆ ಆಕರ್ಷಕವಾಗಿ ಕಾಣಬೇಕಾದರೆ ಎಲ್ಲ ವ್ಯಾಪಾರಿಗಳಿಗೆ ಒಂದೇ ಮಾದರಿ ಛತ್ರಿ ವಿನ್ಯಾಸಗೊಳಿಸಿ ಅದನ್ನು ಅವರಿಗೆ ನೀಡಬೇಕು. ಈ ನಿಟ್ಟಿನಲ್ಲಿ ಯಾವ ಮಾದರಿ ಛತ್ರಿ ನೀಡಬೇಕು ಎಂಬುದರ ಬಗ್ಗೆ ಅವಲೋಕಿಸಿ ವಿನ್ಯಾಸ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಕಸ ಘಟಕ ಮಾದರಿ ಸ್ಥಳ: ಕೋರಮಂಗಲದಲ್ಲಿರುವ ಕಸ ಮತ್ತು ರಸ ಘಟಕವನ್ನು ಮಾದರಿ ಸ್ಥಳವಾಗಿ ರೂಪಿಸಬೇಕು. ಈ ಸ್ಥಳಕ್ಕೆ ಅಧ್ಯಯನ, ತರಬೇತಿಗೆ ಬರುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕಸ, ರಸ ಘಟಕದಲ್ಲಿ ಪುನರ್ಬಳಕೆ ಮಾಡಬಹುದಾದ ಸಾಮಗ್ರಿಗಳ ಸಂಗ್ರಹ ಘಟಕ, ಒಣತ್ಯಾಜ್ಯ ಸಂಗ್ರಹಣಾ ಘಟಕ, ಜೈವಿಕ ಅನಿಲ ಘಟಕ ಹಾಗೂ ಮಿನಿ ಟ್ರಾನ್ಸರ್ ಸ್ಟೇಷನ್ ಇದೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ದುರ್ವಾಸನೆ ಬಾರದಂತೆ ಸ್ಪ್ರೇ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು, ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದಲ್ಲಿ ಕಮೋರ್ಡ್, ಹಾಸಿಗೆ ಮತ್ತು ಪೀಠೋಪಕರಗಳ ಸಂಗ್ರಹಿಸುವ ಸಲುವಾಗಿ ವಲಯಕ್ಕೊಂದು ಸ್ಥಳ ಮೀಸಲಿಡಬೇಕು. ಈ ಸಂಬಂಧ ಆಯಾ ವಲಯ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ ಪುನರ್ಬಳಕೆ ವಸ್ತುಗಳನ್ನು ಆ ಸ್ಥಳಕ್ಕೆ ತಂದು ನೀಡುವಂತಹ ವ್ಯವಸ್ಥೆ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net