ವಿದ್ಯೆ, ಮದುವೆ, ಮಕ್ಕಳನ್ನು ಕರುಣಿಸೋ ಗೌರಿ- ಗಣೇಶ್

27Kush04
Published on

ಕೆ.ಎಸ್. ನಾಗೇಶ್ ಕುಶಾಲನಗರ
ಭಕ್ತಿಯಿಂದ ಯಾರೇ ಬಂದು ಸಂಕಲ್ಪ ಮಾಡಿಕೊಂಡರೆ ಗೌರಿ ಮತ್ತು ಬಾಲ ಗಣಪತಿಯ ಅನುಗ್ರಹ ಖಂಡಿತ ದೊರೆಯುತ್ತದೆ ಎಂದು ಭಕ್ತ ರು ನಂಬಿದ್ದಾರೆ. ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ಕಾಲನಿಯಲ್ಲಿ ೪ ವರ್ಷಗಳ ಹಿಂದೆ ಪ್ರತಿಷ್ಠಾಪನೆಯಾದ ಗೌರಿ ಮತ್ತು ಬಾಲ ಗಣಪತಿ ದೇವಾಲಯದ ಮೇಲೆ ಭಕ್ತರು ಅಪಾರ ನಂಬಿಕೆ ಹೊಂದಿದ್ದಾರೆ.

ಅತ್ಯಂತ ವಿರಳ ಎನ್ನುವ ತಾಯಿ ಗೌರಿ ತೊಡೆ ಮೇಲೆ ಕುಳಿತಿರುವ ಬಾಲ ಗಣಪತಿಗೆ ಪ್ರತಿದಿನ ಪೂಜೆ ಪುನಸ್ಕಾರಗಳನ್ನು ಅರ್ಚಕ ಶ್ರೀಧರ್ ಭಟ್ ನೆರವೇರಿಸುತ್ತಾರೆ. ಇಲ್ಲಿ ಮಕ್ಕಳಿಗೆ ಮದುವೆಯಾಗದವರು, ಚೆನ್ನಾಗಿ ಓದದವರು, ಸ್ವಂತ ಮನೆಯ ಕನಸ್ಸು ಕಂಡವರು, ಮಕ್ಕಳಾಗ ದವರು ಇಲ್ಲಿ ಬಂದು ಭಕ್ತಿಯಿಂದ ಬೇಡಿಕೊಂಡರೆ ಖಂಡಿತ ಈಡೇರುತ್ತೆ ಎನ್ನುತ್ತಾರೆ ವಿಜಿ ಮಲ್ಲೇಶ್.

ಕೆಲ ಮುಸ್ಲಿಮರು ಕೂಡ ಈ ದೇವಸ್ಥಾನಕ್ಕೆ ಭಕ್ತರಿದ್ದಾರೆ. ಹಲವರು ತಮ್ಮ ಮನಸ್ಸಿನಲ್ಲಿ ದೇವರಿಗೆ ಬೇಡಿಕೆಗಳನ್ನು ಇಟ್ಟು ಅದು ಈಡೇರಿದ ನಂತರ ತಮ್ಮ ಶಕ್ತಿಯಾನುಸಾರ ಹರಿಕೆ ತೀರಿಸುತ್ತಿದ್ದಾರೆ. ದೇವಾಲಯ ಪ್ರತಿಷ್ಠಾಪನೆಗೂ ಮುಸ್ಲಿಮರು, ಕ್ರೈಸ್ತರು ದೇಣಿಗೆ ನೀಡಿದ್ದಾರೆ.
ಈ ದೇವಾಲಯದ ವಾರ್ಷಿಕೋತ್ಸವ ಸಂದರ್ಭದಲ್ಲಿ ಜಾತಿ ಮತ ಮೀರಿ ಭಕ್ತಾಧಿಗಳು ಭಾಗವಹಿಸಿ ಗ್ರಾಮದ ಸಾಮರಸ್ಯಕ್ಕೆ ಕಾರಣವಾಗಿದೆ.

ವಿ.ಆರ್. ಕೃಷ್ಣರಾಜ್ ಶೆಟ್ಟಿ ಅವರ ಸ್ಫೂರ್ತಿಯಿಂದ ಗ್ರಾಮದ ಸುಚಿತ್ರ ನೇತೃತ್ವದಲ್ಲಿ ಚಂದ್ರಿಕಾ, ರಾಧಾ, ವಿಜಿಯಾ, ಜ್ಯೋತಿ ಅವರು ಅಷ್ಟಮಂಗಲ ಪ್ರಶ್ನೆ ಕೇಳಿ, ೩೦ ವರ್ಷಗಳಿಂದ ಅಗದಿದ್ದ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಿಸುವಲ್ಲಿ ಯಶಸ್ವಿಯಾದರೆಂದು ಗ್ರಾಮಸ್ಥರು ಹೇಳುತ್ತಾರೆ. ಕೇವಲ ಮಹಿಳೆಯರೇ ಇದ್ದ ಕಾರಣ ನಾಗ ಪ್ರವೀಣ್, ಮಂಟಿ ಲೋಕೇಶ್, ಪೂಜಾ ವಿನು, ಅನಂತ, ಸಚಿನ್, ಸಂತೋಷ್, ನಾಗ, ತಮ್ಮಯ್ಯ ಮತ್ತು ಸಂತೋಷ ಟ್ರಸ್ಟ್ ಒಂದನ್ನು ರಚಿಸಿಕೊಂಡು ದೇವಸ್ಥಾನ ಕಟ್ಟಿಸಲು ಶ್ರಮಿಸಿದ್ದಾರೆ.

**
ಮಗಳ ಮದುವೆ ಮಾಡಲು ಎಷ್ಟು ಕಷ್ಟಪಟ್ಟರು ಸಾಧ್ಯವಾಗಿರಲಿಲ್ಲ. ಈ ದೇವಸ್ಥಾನಕ್ಕೆ ಬಂದು ಅರ್ಚಕರ ಸಲಹೆ ಮೇರೆಗೆ ಭಕ್ತಿಯಿಂದ ತಾಯಿ ಮಗನನ್ನು ಬೇಡಿಕೊಂಡೆ. ಕೆಲವೇ ದಿನಗಳಲ್ಲಿ ಗಂಡಿನ ಮನೆಯವರೇ ಹುಡುಕಿಕೊಂಡು ಬಂದು ಮದುವೆ ಮಾಡಿಕೊಂಡರು. ಮಗಳನ್ನು ಒಳ್ಳೆಯ ಮನೆಗೆ ಸೇರಿದ್ದಾಳೆ ಎನ್ನುವ ಖುಷಿಯಿದೆ. ವಿಜಿ ಮಲ್ಲೇಶ್, ಗೃಹಿಣಿ, ಜನತಾ ಕಾಲನಿ.

**
ಸಂಬಂಧಿಕರಿಗೆ ಮಕ್ಕಳಾಗಿರಲಿಲ್ಲ. ಎಲ್ಲಿ ಶಾಸ್ತ್ರ ಕೇಳಿದರು ಆಗಿರಲಿಲ್ಲ. ಕೊನೆಗೆ ಪರಿಚಯಸ್ಥರ ಸಲಹೆಯಂತೆ ಗೌರಿ ಮತ್ತು ಬಾಲ ಗಣಪತಿಯನ್ನು ಆ ದಂಪತಿಗಳು ಭಕ್ತಿಯಿಂದ ಬೇಡಿಕೊಂಡ ಕೆಲವೇ ದಿನಗಳಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಕರೆದುಕೊಂಡು ಬಂದು ತಮ್ಮ ಹರಕೆ ತೀರಿಸಿ ಹೋದರು. ಪಕ್ಕದ ಮನೆಯ ಮುಸ್ಲಿಂ ಕುಟುಂಬ ಕೂಡ ತನ್ನ ಎಲ್ಲಾ ಕಷ್ಟ ಸುಖಗಳಿಗೆ ಇಲ್ಲಿ ಹರಕೆ ಹೊರುತ್ತಾರೆ. ಬೇಡಿಕೆ ಈಡೇರಿದ ನಂತರ ನನ್ನ ಕೈಯಲ್ಲಿ ಹರಕೆ ತೀರಿಸುತ್ತಾರೆ. ಚಂದ್ರಿಕಾ ವೆಂಕಟೇಶ್, ಗೃಹಿಣಿ, ಮುಳ್ಳುಸೋಗೆ ಗ್ರಾಮ.

**
ಭಕ್ತಾದಿಗಳ ಬೇಡಿಕೆ ಈಡೇರಿಸುವ ಶಕ್ತಿ ಹೊಂದಿರುವ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷೆ ಎನ್ನುವುದೇ ಹೆಮ್ಮೆ. ಭಕ್ತರು ಈಗ ಬೇರೆ ಕಡೆಗಳಿಂದ ಬರುವವರು ಹೆಚ್ಚಾಗಿದ್ದಾರೆ. ಬಾಯಿ ಮಾತಿನಿಂದಲ್ಲೇ ದೇವರ ಶಕ್ತಿ ಪ್ರಚಾರ ಪಡೆದುಕೊಳ್ಳುತ್ತಿದೆ. ಸುಚಿತ್ರ ತಮ್ಮಯ್ಯ, ಅಧ್ಯಕ್ಷೆ,

ದೇವಾಲಯ ಅಭಿವೃದ್ಧಿ ಸಮಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net