ವಿಜಯವಾಣಿ ಪರಿಣಾಮ ಅಗೆದ ಮುಲ್ಲಕಾಡು-ಮೇರಿಹಿಲ್ ಸಂಪರ್ಕ ರಸ್ತೆಗೆ ಕಾಮಗಾರಿ ಪೂರ್ಣ

mng--29 April Merihill Folowup
Published on

ಮಂಗಳೂರು: ಕಾವೂರು ಮುಲ್ಲಕಾಡುನಿಂದ ಐಜಿಪಿ ಬಂಗ್ಲೆ ಬಳಿಯಾಗಿ ಮೇರಿಹಿಲ್‌ಗೆ ಸಂಪರ್ಕ ಕಲ್ಪಿಸುವ ತುಂಡರಿಸಿದ ಕಾಂಕ್ರೀಟು ರಸ್ತೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ.


ಜಲಸಿರಿ ಯೋಜನೆ ಹಾಗೂ ಗೇಲ್ ಗ್ಯಾಸ್ ಪೈಪ್ ಅಳವಡಿಸಲು ರಸ್ತೆ ಅಗೆದು ಹಾಕಿದನ್ನು ಸರಿಪಡಿಸದೇ ಇರುವುದರ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿತ್ತು. ಪರಿಣಾಮವಾಗಿ ತುಂಡರಿಸಿದ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಪ್ರಸ್ತುತ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.


ಇದು ಅಗಲ ಕಿರಿದಾಗಿ ಏರು ರಸ್ತೆಯಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ ಆಟೋರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡಿದ್ದರು. ಈ ರಸ್ತೆಯಲ್ಲಿ ನಾಲ್ಕು ಕಡೆಗಳಲ್ಲಿ ತಿರುವು ಇದ್ದು, ಕಾಂಕ್ರೀಟು ಆಗೆದು ಹಾಕಿದ ಕಾರಣ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ರಸ್ತೆ ಇಕ್ಕಟ್ಟಾಗಿರುವುದರಿಂದ ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡಲು ಜಾಗವಿಲ್ಲದಂತಾಗಿತ್ತು.


ತುಂಡರಿಸಿದ ರಸ್ತೆಯನ್ನು ಜೋಡಣೆ ಮಾಡಿ, ತಿರುವುಗಳನ್ನು ಸರಿಪಡಿಸಿದ ಪರಿಣಾಮ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗಿದೆ. ಪ್ರತಿ ದಿನ ಸಾವಿರಾರು ಮಂದಿ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಮುಲ್ಲಕಾಡು ಕಡೆಯಿಂದ ಮೇರಿಹಿಲ್‌ಗೆ ಬರುವವರಿಗೆ ಇದು ಹತ್ತಿರದ ರಸ್ತೆಯಾಗಿದೆ. ಮಕ್ಕಳನ್ನು ಶಾಲೆಗೆ ಬಿಡಲು, ಸಂಜೆ ಕರೆದೊಯ್ಯಲು ಬಹಳಷ್ಟು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಾರೆ.


ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಈ ರಸ್ತೆಗೆ 30 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ ಮಾಡಲಾಗಿತ್ತು. ಕಳೆದ ವರ್ಷ ಪೈಪ್ ಅಳವಡಿಸಲು ರಸ್ತೆಯ ಬಹಳಷ್ಟು ಕಾಂಕ್ರೀಟು ತುಂಡರಿಸಿ ತೆಗೆದು ಹಾಕಲಾಗಿತ್ತು. ಇದರಿಂದ ರಸ್ತೆ ಅಗಲ ಕಿರಿದಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net