

ಮಂಗಳೂರು: ಪೆಟ್ರೋಲ್ ತರಲು ಬಾಟಲಿ ಬೇಕೆಂದು ಕೇಳಿಕೊಂಡು ಬಂದಿದ್ದ ನಾಲ್ವರು ದುಷ್ಕರ್ಮಿಗಳು ಮನೆಯೊಡತಿಗೆ ಚೂರಿ ತೋರಿಸಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಸೆಳೆದೊಯ್ದ ಘಟನೆ ಭಾನುವಾರ ನಡೆದಿದೆ.
ಕೋಲ್ನಾಡು ರಾಷ್ಟ್ರೀಯ ಹೆದ್ದಾರಿಯಿಂದ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಸ್ ನಿಲ್ದಾಣ ಬಳಿ ನಿವಾಸಿ ಸದಾಶಿವ ಶೆಟ್ಟಿ ಎಂಬುವರ ಪತಿ ವಸಂತಿ ಶೆಟ್ಟಿ ಸರ ಕಳೆದುಕೊಂಡವರು.
ಸದಾಶಿವ ಶೆಟ್ಟಿ ಮತ್ತು ವಸಂತಿ ಶೆಟ್ಟಿ ದಂಪತಿ ತುರ್ತು ಕೆಲಸದ ನಿಮಿತ್ತ ಭಾನುವಾರ ಬೆಳಗ್ಗೆ ಹಳೆಯಂಗಡಿ ಪೇಟೆಗೆ ತೆರಳಿದ್ದರು, ಕೆಲಸ ಮುಗಿದ ಬಳಿಕ ಪತ್ನಿಯನ್ನು ಆಟೋದಲ್ಲಿ ಮನೆಗೆ ಕಳುಹಿಸಿದ್ದರು. ಅವರು ಮನೆಗೆ ಬಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಬೈಕ್‌ನಲ್ಲಿ ಬಂದಾತ ಪೆಟ್ರೋಲ್ ಖಾಲಿಯಾಗಿದ್ದು, ಅದನ್ನು ತರಲು ಬಾಟಲಿ ಬೇಕೆಂದು ಕೇಳಿದ್ದಾನೆ. ಮಹಿಳೆ ನೀರಿನ ಖಾಲಿ ಬಾಟಲಿ ನೀಡಿದ್ದಾರೆ. ಅದನ್ನು ಪಡೆದು ಹೋದಾತ ಮತ್ತೆ ಬಂದು ಚಿಕ್ಕ ಬಾಟಲಿ ಬೇಕೆಂದು ಕೇಳಿದ್ದಾನೆ, ಮಹಿಳೆ ಬಾಟಲಿ ಹುಡುಕಿ ತರುವಷ್ಟರಲ್ಲಿ ಮನೆ ಬಾಗಿಲಲ್ಲಿ ನಿಂತಿದ್ದ ಮೂವರು ಚೂರಿ ತೋರಿಸಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಕಿತ್ತ್ತುಕೊಂಡು ಪರಾರಿಯಾಗಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳವು: ಇದೇ ವೇಳೆ ಚಂದ್ರಮೌಳೀಶ್ವರ ಕ್ರಾಸ್ ಬಳಿ ಭಾನುವಾರ ಬೆಳಗ್ಗೆ ಪಾರ್ಕ್ ಮಾಡಿದ್ದ ಬೆಳ್ಳಾಯರು ನಿವಾಸಿ ಸೂರ್ಯಪ್ರಕಾಶ್ ಭಟ್ ಎಂಬುವರ ಬೈಕ್ ನಾಪತ್ತೆಯಾಗಿದ್ದು. ಮಹಿಳೆಯ ಸರ ಎಗರಿಸಿದ ಕಳ್ಳರೇ ಈ ಬೈಕನ್ನೂ ಕದ್ದು ಪರಾರಿಯಾಗಿರುವ ಶಂಕೆ ವ್ಯಕ್ತಗೊಂಡಿದೆ.
ಸ್ಥಳಕ್ಕೆ ಡಿಸಿಪಿ(ಅಪರಾಧ) ದಿನೇಶ್ ಕುಮಾರ್, ಎಸಿಪಿ ಮನೋಜ್ ಕುಮಾರ್, ಸುರತ್ಕಲ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಮುಲ್ಕಿ ಎಸ್‌ಐ ವಿನಾಯಕ ಬಾವಿಕಟ್ಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.