ಅಕ್ರಮ ಮಟ್ಕಾ ದಂಧೆಗೆ ತಡೆ : ಸದಸ್ಯರ ಒತ್ತಾಯ : ಮೂಲ್ಕಿ ನ.ಪಂ. ಮಾಸಿಕ ಸಭೆ

New Project (13)
Published on

ಮೂಲ್ಕಿ: ಮೂಲ್ಕಿ ಕೆ.ಎಸ್.ರಾವ್ ನಗರದಲ್ಲಿ ಅಕ್ರಮ ದಂಧೆ, ನ.ಪಂ. ಸಿಬ್ಬಂದಿಗೆ ಅಪರಿಚಿತ ಕಿಡಿಗೇಡಿಗಳಿಂದ ಬೆದರಿಕೆ ಕರೆ, ರಸ್ತೆಯಲ್ಲಿ ವಿದ್ಯಾರ್ಥಿಗಳಿಂದ ಬೈಕ್ ತ್ರಿಬಲ್ ರೈಡ್, ಕೊಕ್ಕರಕಲ್ ಬಳಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ರಾಷ್ಟ್ರೀಯ ಹೆದ್ದಾರಿ ತೆರೆದ ಚರಂಡಿಗೆ, ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಕೊಳಚೆ ಚರಂಡಿಯಲ್ಲಿರುವ ಕುಡಿಯುವ ನೀರಿನ ಪೈಪ್ ಮುಂತಾದ ದೂರುಗಳೊಂದಿಗೆ ಮೂಲ್ಕಿ ನ.ಪಂ. ಮಾಸಿಕ ಸಭೆ ಅಧ್ಯಕ್ಷ ಸತೀಶ್ ಅಂಚನ್ ನೇತೃತ್ವದಲ್ಲಿ ಮಂಗಳವಾರ ನಡೆಯಿತು.

ಸದಸ್ಯ ಮಂಜುನಾಥ ಕಂಬಾರ್ ಮಾತನಾಡಿ, ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಪೊಲೀಸ್ ಅಧಿಕಾರಿಗಳು ದಂಧೆ ನಿಯಂತ್ರಿಸಲು ವಿಫಲವಾಗಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ. ಕೂಡಲೇ ಅಕ್ರಮ ದಂಧೆಗಳಿಗೆ ತಡೆ ಹಾಕಲು ಪೊಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.

ರಸ್ತೆದಾಟಲು ಪೊಲೀಸರ ನಿಯೋಜನೆ: ಶಾಲಾ ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ರಸ್ತೆದಾಟಲು ಸಹಕಾರಿಯಾಗಿ ಪೊಲೀಸರ ನಿಯೋಜನೆ ಬಹಳ ಅಗತ್ಯವಿದ್ದು, ಶಾಲೆ ಬಿಡುವ ಸಮಯದಲ್ಲಿ ಕೆಲವೊಂದು ಯುವಕರು ಬೈಕ್‌ನಲ್ಲಿ ತ್ರಿಬಲ್ ರೈಡ್ ಮೂಲಕ ಅತಿ ವೇಗದಲ್ಲಿ ಅಪಾಯಕಾರಿಯಾಗಿ ರಸ್ತೆಯಲ್ಲಿ ಹೋಗುತ್ತಿರುವುದು ಕಂಡುಬರುತ್ತಿದ್ದು, ಅವರ ನಿಯಂತ್ರಣ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ ಹಾಗೂ ಸದಸ್ಯ ಲೋಕೇಶ್ ಕೋಟ್ಯಾನ್ ಪೊಲೀಸರಿಗೆ ಸೂಚನೆ ನೀಡಿದರು.

ಮಾರ್ಗ ದುರಸ್ತಿಗೆ ಒತ್ತಾಯ: ಮೂಲ್ಕಿ ರೈಲ್ವೆ ನಿಲ್ದಾಣದಲ್ಲಿ ಇನ್ನೊಂದು ಫ್ಲಾಟ್ ಫಾರ್ಮ್‌ನ ಅವಶ್ಯಕತೆ, ನಿಲ್ದಾಣಕ್ಕೆ ಹೋಗುವ ರಸ್ತೆ ದುರಸ್ತಿ ಬಗ್ಗೆ ಸದಸ್ಯ ಯೋಗೀಶ್ ಕೋಟ್ಯಾನ್ ಪ್ರಸ್ತಾಪಿಸಿ, ಕೊಕ್ಕರಕಲ್ ಬಳಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ರಾಷ್ಟ್ರೀಯ ಹೆದ್ದಾರಿ ತೆರೆದ ಚರಂಡಿಗೆ ಬಿಡುತ್ತಿದ್ದು, ಗದ್ದೆಯಲ್ಲಿ ನೀರು ಸಂಗ್ರಹವಾಗಿ ಪರಿಸರದ ಬಾವಿಗಳು ಉಪಯೋಗ ಹೀನವಾಗುತ್ತಿದ್ದು, ರೋಗದ ಭೀತಿ ಎದುರಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಡುಬೈಲು ಬಳಿ ಉಪ್ಪು ನೀರು ತಡೆಗೋಡೆ ಕಾಮಗಾರಿ ಅರ್ಧದಲ್ಲಿ ನಿಂತಿರುವ ಕಾರಣ ಕೃಷಿ ಹಾನಿಯಾಗುತ್ತದೆ ಎಂದು ರಾಧಿಕಾ ಕೋಟ್ಯಾನ್ ಗಮನ ಸೆಳೆದರು.

ಪೈಪ್ ವ್ಯವಸ್ಥೆಗೆ ಆಗ್ರಹ: ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಕೊಳಚೆ ಚರಂಡಿಯಲ್ಲಿರುವ ಕುಡಿಯುವ ನೀರಿನ ಪೈಪನ್ನು ತೆರವುಗೊಳಿಸಿ ಹೊರಗೆ ವ್ಯವಸ್ಥೆ ಮಾಡಬೇಕಾಗಿದೆ. ಉದ್ಯಾನವನದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿ, ಮೂಲ್ಕಿ ಗಾಂಧಿ ಮೈದಾನದ ಬಳಿಯ ಬಹು ಮಹಡಿ ಕಟ್ಟಡದ ತ್ಯಾಜ್ಯ ನೀರು ಸಾರ್ವಜನಿಕ ಚರಂಡಿಯಲ್ಲಿ ಸಂಗ್ರಹವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯ ಭೀಮಾ ಶಂಕರ್ ಆರ್.ಕೆ. ಒತ್ತಾಯಿಸಿದರು. ನ.ಪಂ. ಸಿಬ್ಬಂದಿಗೆ ಅಪರಿಚಿತ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬರುತ್ತಿದ್ದು, ತನಿಖೆ ನಡೆಸುವಂತೆ ಸದಸ್ಯ ಬಾಲಚಂದ್ರ ಕಾಮತ್ ಒತ್ತಾಯಿಸಿದರು.

ನ.ಪಂ. ಸದಸ್ಯರ ವಾರ್ಡ್‌ನಲ್ಲಿ ಕಾಮಗಾರಿ ನಡೆಸುವಾಗ ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯೆ ವಂದನಾ ಕಾಮತ್ ಒತ್ತಾಯಿಸಿದರು. ಇದಕ್ಕೆ ಮುಖ್ಯಾಧಿಕಾರಿ ಮಧುಕರ್ ಸಮ್ಮತಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನ.ಪಂ. ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ಬಗ್ಗೆ ಸಾಹಸ್ ಎನ್‌ಜಿಒ ಸುದೀಪ್ ಕಿಣಿ ಮಾಹಿತಿ ನೀಡಿದರು. ಮೂಲ್ಕಿ ತಾಲೂಕು ಅಭಿವೃದ್ಧಿ ಬಗ್ಗೆ ಸಮಿತಿ ಅಧ್ಯಕ್ಷ ಹರೀಶ್ ಪುತ್ರನ್ ನೀಡಿದ ಬೇಡಿಕೆ ಬಗ್ಗೆ ಮಾಹಿತಿ ನೀಡಲಾಯಿತು. 2025-26ನೇ ಸಾಲಿನ ಮುಂಗಡ ಆಯವ್ಯಯ ಪತ್ರ(ಬಜೆಟ್) ತಯಾರಿಸಲು ಸಲಹೆ ಸೂಚನೆ ನೀಡಲಾಯಿತು. ಹಾಗೂ ವಿಜಯಪುರ ಕಾಲನಿಯ ಡಾ.ಬಾಬು ಜಗಜೀವನ್ ರಾಮ್ ಗ್ರಂಥಾಲಯವನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸುವ ಕುರಿತು ಚರ್ಚೆ ನಡೆಯಿತು.

ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿ.ಎಂ., ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ವಿನಂತಿ

ನ.ಪಂ. ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಗುರುತಿಸಿ ಆಯುಷ್ಮಾನ್ ಆರೋಗ್ಯ ಕೇಂದ್ರ ಸ್ಥಾಪಿಸಲು ಸದಸ್ಯ ಯೋಗೀಶ್ ಕೋಟ್ಯಾನ್ ಕಂದಾಯ ಇಲಾಖೆಗೆ ವಿನಂತಿಸಿದರು. ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್ ಸೂಕ್ತ ಕ್ರಮಕ್ಕೆ ಭರವಸೆ ನೀಡಿದರು. ನ.ಪಂ. ಸಭೆಗೆ ಆರೋಗ್ಯ ಸಹಿತ ವಿವಿಧ ಇಲಾಖೆ ಗೈರು ಬಗ್ಗೆ ಸದಸ್ಯ ಬಾಲಚಂದ್ರ ಕಾಮತ್ ಅಸಮಾಧಾನ ವ್ಯಕ್ತಪಡಿಸಿದರು.

ಬಿಲ್ ಪಾವತಿಗೆ ನೋಟಿಸ್

ಮಂಗಳೂರಿನಿಂದ ಮೂಲ್ಕಿಗೆ ಬರುವ ತುಂಬೆ ಕುಡಿಯುವ ನೀರಿನ ಪಾಲುದಾರ ಹಳೆಯಂಗಡಿ ಗ್ರಾ.ಪಂ. ಕುಡಿಯುವ ನೀರಿನ ಬಿಲ್ ಬಾಕಿ ಏನಾಯಿತು? ಎಂದು ಮಂಜುನಾಥ ಕಂಬಾರ ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷ ಸತೀಶ್ ಅಂಚನ್ ಉತ್ತರಿಸಿ ಬಿಲ್ ಪಾವತಿ ಮಾಡುವಂತೆ ಪಂಚಾಯಿತಿಗೆ ನೋಟಿಸ್ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net