

ಉಡುಪಿ: ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿ.ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಹತ್ತುಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದ್ದು, ಮಾರ್ಚ್ 25ರಂದು ಪ್ರದಾನ ಮಾಡಲಾಗುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಎಂ ರೋಹಿಣಿಯವರು ಬಂಗ್ರಮಂಜೇಶ್ವರದಲ್ಲಿ ಜನಿಸಿದ್ದು, ಪ್ರಸ್ತುತ ಮಂಗಳೂರು ಕುಡುಪುವಿನಲ್ಲಿ ನೆಲೆಸಿದ್ದಾರೆ. ಇವರು ಟಿ.ಸಿ.ಎಚ್. ಹಿಂದಿ ಪ್ರವೀಣ್ ಹಾಗೂ ಕನ್ನಡ ಸ್ನಾತಕೋತ್ತರ ಪದವೀಧರೆಯಾಗಿದ್ದು, ಸುಮಾರು 30 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ, ಸಂಶೋಧನೆ ಹಾಗೂ ಬರಹ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವಾರು ಕಥಾಸಂಕಲನಗಳು, ಕವನ ಸಂಕಲನಗಳು ಹಾಗೂ ವ್ಯಕ್ತಿಚಿತ್ರಣಗಳ ಕೃತಿಗಳು ಪ್ರಕಟಗೊಂಡಿವೆ. ತುಳುನಾಡಿನ ಮಾಸ್ತಿಕಲ್ಲುಗಳು-ವೀರಗಲ್ಲುಗಳು, ವೇಶ್ಯಾವಾಟಿಕೆಯ ಕಥೆ-ವ್ಯಥೆ, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ ಇತ್ಯಾದಿ ಅವರ ಮುಖ್ಯ ಕೃತಿಗಳು . ಇವರು ಕನ್ನಡ ಸಾಹಿತ್ಯ ಪರಿಷತ್ ದತ್ತಿನಿಧಿ ಪ್ರಶಸ್ತಿ, ಇನ್ಫೋಸಿಸ್ ಪ್ರಶಸ್ತಿ, ಕಾಂತಾವರ ಸಾಹಿತ್ಯ ಪ್ರಶಸ್ತಿ, ವೀರರಾಣಿ ಅಬ್ಬಕ್ಕ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಯುವವಾಹಿನಿ, ಜೇಸೀಸ್, ಲಯನ್ಸ್, ಬೆಥನಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ನಾಗಂದಿಗೆಯೊಳಗಿಂದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರಕಿದೆ.