

ಮುಳಗುಂದ: ಗದಗ ಮತಕ್ಷೇತ್ರದ ಪ್ರಮುಖ ಪಟ್ಟಣವಾದ ಮುಳಗುಂದದಲ್ಲಿ ಹೇಳಿಕೊಳ್ಳುವಂತಹ ಮಹತ್ವದ ಅಭಿವೃದ್ಧಿ ಕಾರ್ಯಗಳು ಈವರೆಗೂ ಆಗಿಲ್ಲ. ಈ ಬಾರಿಯಾದರೂ ಸಮಗ್ರ ಅಭಿವೃದ್ಧಿಯ ಕನಸು ನನಸಾಗುವ ನಿರೀಕ್ಷೆಯಲ್ಲಿದ್ದಾರೆ ಜನತೆ.
ಪಟ್ಟಣವು 20 ರಿಂದ 25 ಸಾವಿರ ಜನಸಂಖ್ಯೆ ಹೊಂದಿದೆ. ಚಿಂಚಲಿ, ನೀಲಗುಂದ, ಕಲ್ಲೂರು, ನೀಲಗುಂದ, ಸೀತಾಲಹರಿ, ಬಸಾಪುರ ಸೇರಿ ವಿವಿಧ ಗ್ರಾಮಗಳ ಜನರು ಸಣ್ಣ ಕೆಲಸಕ್ಕೂ ಜಿಲ್ಲಾ ಕೇಂದ್ರಕ್ಕೆ ತೆರಳಬೇಕು.
ಎಚ್.ಕೆ. ಪಾಟೀಲ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 2018ರ ಎಚ್.ಕೆ. ಪಾಟೀಲ ಅವರು ಗೆಲುವು ಸಾಧಿಸುವಲ್ಲಿ ಮುಳಗುಂದ ಪಟ್ಟಣ ಮಹತ್ತರ ಪಾತ್ರ ವಹಿಸಿತ್ತು. ಚುನಾವಣೆ ಸಂದರ್ಭದಲ್ಲಿ ನೆನಪಾಗುವ ಪಟ್ಟಣ, ಅಭಿವೃದ್ಧಿ ವಿಚಾರ ಬಂದರೆ ಶಾಸಕರ ಕಣ್ಣಿಗೆ ಕಾಣುವುದಿಲ್ಲ ಎನ್ನುವ ಅಸಮಾಧಾನ ಜನರಲ್ಲಿದೆ.
ಶಾಸಕರ ಮುಂದೆ ಸವಾಲುಗಳು: ಪಟ್ಟಣದಲ್ಲಿ ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ಕೃಷಿ ಉತ್ಪನ್ನ ಮಾರಾಟ ಉಪ ಮಾರುಕಟ್ಟೆ, ವಿದ್ಯುತ್ ಗ್ರಿಡ್, ಕ್ರೀಡಾಂಗಣ, ಸುಸಜ್ಜಿತ ಒಳಚರಂಡಿ ನಿರ್ಮಾಣವಾಗಬೇಕಿದೆ. ಪಟ್ಟಣದ ಜನತೆಯ ಮೂಲ ಉದ್ಯೋಗ ಕೃಷಿ. ಬಿತ್ತನೆ ಸಮಯದಲ್ಲಿ ಬೀಜ, ರಸಗೊಬ್ಬರ ಖರೀದಿಗೆ ಕೃಷಿ ಇಲಾಖೆಯ ಯೋಜನೆಗಳ ಲಾಭ ಪಡೆಯಲು ಪಟ್ಟಣ ಪಂಚಾಯಿತಿಯಿದ್ದರೂ ಹುಲಕೋಟಿ ಗ್ರಾಮಕ್ಕೆ ರೈತರು ತೆರಳಬೇಕಾಗಿದೆ.
ಜಾತಿ, ಆದಾಯ ಪ್ರಮಾಣಪತ್ರ, ವಾರಸಾ, ಪಡಿತರ ಚೀಟಿ, ಉತಾರ, ಆಧಾರ್ ಕಾರ್ಡ್ ತಿದ್ದುಪಡಿ ಸೇರಿ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಮುಳಗುಂದ ಪಟ್ಟಣದಿಂದ 20 ಕಿ.ಮೀ ದೂರದ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಿದೆ.ಪಟ್ಟಣದಲ್ಲಿಯೇ ನಾಡಕಚೇರಿ ಕಾರ್ಯಾರಂಭ ಮಾಡಿದರೆ ಉಪತಹಸೀಲ್ದಾರ್, ಕಂದಾಯ ನಿರೀಕ್ಷಕರು ಇರುತ್ತಾರೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 15ರಿಂದ 20 ದಾಖಲೆಗಳನ್ನು ಇಲ್ಲಿಯೇ ಪಡೆಯಬಹುದು. ಸುತ್ತ್ತಲಿನ ಗ್ರಾಮಗಳಿಗೂ ಅನುಕೂಲವಾಗುತ್ತದೆ.
ಪ್ರಮುಖ ಬೇಡಿಕೆಯಾದ ವಿದ್ಯುತ್ ಗ್ರಿಡ್ ನಿರ್ಮಾಣ ಮೂರು ದಶಕದಿಂದ ನನೆಗುದಿಗೆ ಬಿದ್ದಿದೆ. ಈವರೆಗೂ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಪಟ್ಟಣಕ್ಕೆ ತುಂಗಭದ್ರಾ ಕುಡಿಯುವ ನೀರು ಸರಬರಾಜು ಮಾಡಲು 2013ರಲ್ಲಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಒಂದೇ ವರ್ಷದಲ್ಲಿ ತುಂಗಭದ್ರಾ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿತು. ಜನರಿಗೆ ಫ್ಲೊರೈಡ್‌ಯುಕ್ತ ನೀರೇ ಗತಿಯಾಗಿದೆ. ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣ, ಸ್ಟೇಡಿಯಂ ಹಾಗೂ ಕೃಷಿ ಉತ್ಪನ್ನ ಮಾರಾಟ ಉಪ ಮಾರುಕಟ್ಟೆ ಪ್ರಾರಂಭಿಸಬೇಕು ಎನ್ನುವುದು ಜನತೆಯ ಒತ್ತಾಯವಾಗಿದೆ.
ಶಾಸಕ ಎಚ್.ಕೆ. ಪಾಟೀಲ ಅವರು ಕಳೆದೆರಡು ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುದಾಗಿ ಭರವಸೆ ನೀಡಿದ್ದರು. ಅದು ಕಾರ್ಯರೂಪಕ್ಕೆ ಬಂದಿಲ್ಲ. ಈ ಬಾರಿಯಾದರೂ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ, ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.
ಮುಳಗುಂದ ಪಟ್ಟಣದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಕೆ. ಪಾಟೀಲ ಅವರು ಅಭಿವೃದ್ಧಿ ವಿಚಾರದಲ್ಲಿ ಪಟ್ಟಣಕ್ಕೆ ಆದ್ಯತೆ ನೀಡಿಲ್ಲ. ನಾಡಕಚೇರಿ, ರೈತ ಸಂಪರ್ಕ ಕೇಂದ್ರ ನಿರ್ಮಾಣ ಮಾಡುವಂತೆ ಹಲವಾರು ಬಾರಿ ಶಾಸಕರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಈ ಬಾರಿ ಸರಿಯಾಗಿ ಸ್ಪಂದಿಸದಿದ್ದರೆ ಮುಂದೆ ಜನರೇ ಪಾಠ ಕಲಿಸಲಿದ್ದಾರೆ.-ದೇವರಾಜ ಸಂಗನಪೇಟಿ, ರೈತ ಸಂಘದ ಕಾರ್ಯದರ್ಶಿ, ಮುಳಗುಂದ