ಮುಳಗುಂದ ಪಟ್ಟಣ ಪಂಚಾಯಿತಿ 32.14 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

11 MUL 1
Published on

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ 2025- 26ನೇ ಸಾಲಿನ ಬಜೆಟ್ ಮಂಡನೆ ಮಾಡಲಾಯಿತು. ಪಟ್ಟಣಕ್ಕೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ.

ವಿವಿಧ ಮೂಲಗಳಿಂದ 11.37 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ಮೂಲ ಸೌಲಭ್ಯ ಒದಗಿಸಲು 11.05 ಕೋಟಿ ರೂ. ನೀಡಲಾಗಿದೆ. ಒಟ್ಟು 32.14 ಲಕ್ಷ ರೂ.ಗಳ ಉಳಿತಾಯ ಆಯವ್ಯಯ ಇದಾಗಿದೆ ಎಂದು ಮುಖ್ಯಾಧಿಕಾರಿ ಮಂಜುನಾಥ ಗುಳೇದ ತಿಳಿಸಿದರು.

ಜೆಡಿಎಸ್‌ನ ಮಹಾಂತೇಶ ಕಣವಿ ಮಾತನಾಡಿ, ಬೀದಿದೀಪ ನಿರ್ವಹಣೆಗೆ ಅನುದಾನವಿದ್ದರೂ ಕೆಲವು ಭಾಗದಲ್ಲಿ ದೀಪಗಳು ಉರಿಯುತ್ತಿಲ್ಲ. ಬೇಸಿಗೆ ಆರಂಭವಾಗಿದ್ದು, ಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ತುಂಗಭದ್ರಾ ನದಿ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಶಾಲೆ, ಕಾಲೇಜು ಹೆಚ್ಚು ಇರುವ ಕಡೆ ಸಾರ್ವಜನಿಕ ಗ್ರಂಥಾಲಯ ಸ್ಥಳಾಂತರ ಮಾಡಬೇಕು. ಆರ್‌ಎನ್‌ಡಿ ಕಾಲೇಜ್, ಅಂಬೇಡ್ಕರ್ ನಗರದ ನಡುವೆ ರಸ್ತೆ ನಿರ್ಮಾಣ, ಹೊಲದ ಕಾಲುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ತುಂಗಭದ್ರಾ ನದಿ ನೀರು ಪೂರೈಸಲು 2.0 ಯೋಜನೆ ಅಡಿ ಅನುದಾನ ಬಿಡುಗಡೆಯಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ನದಿ ನೀರು ಸರಬರಾಜು ನಿರ್ವಹಣೆಗೆ ಬಜೆಟ್‌ನಲ್ಲಿ 50 ಲಕ್ಷ ರೂ. ಮೀಸಲಿಡಲಾಗಿದೆ. ಗ್ರಂಥಾಲಯ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವ ಪ್ರಸ್ತಾವ ಕಳುಹಿಸಲಾಗಿದೆ. ಅಗತ್ಯವಿರುವ ಕಡೆ ಚರಂಡಿ, ಕಾಲುವೆ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು.

ರೇಖಾ ಹೊಸಮನಿ ಖರ್ಚು ವೆಚ್ಚದ ಮಾಹಿತಿ ಓದಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಯಲ್ಲವ್ವ ಕವಲೂರ, ಉಪಾಧ್ಯಕ್ಷೆ ಅನಸೂಯಾ ಸೋಮಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಇಮಾಮಸಾಬ್ ಶೇಖ್, ಸದಸ್ಯರಾದ ಕೆ.ಎಲ್. ಕರೇಗೌಡ್ರ, ದ್ಯಾಮಣ್ಣ ನೀಲಗುಂದ, ಎಸ್.ಸಿ. ಬಡ್ನಿ, ಮಹಾಂತೇಶ ನೀಲಗುಂದ, ಎನ್.ಆರ್. ದೇಶಪಾಂಡೆ, ವಿಜಯ ನೀಲಗುಂದ, ಮಹಾದೇವಪ್ಪ ಗಡಾದ, ಬಸವರಾಜ ಹಾರೋಗೇರಿ, ನೀಲವ್ವ ಅಸುಂಡಿ, ಉಮಾ ಮಟ್ಟಿ, ಚಂಪಾವತಿ ಗುಳೇದ, ಮರಿಯಪ್ಪ ನಡುಗೇರಿ, ದಾವೂದ್ ಜಮಾಲಸಾಬನವರ, ಸಮುದಾಯ ಯೋಜನಾಧಿಕಾರಿ ವಾಣಿಶ್ರೀ ನಿರಂಜನ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net