ಮುಳಗುಂದ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ 21ರಿಂದ

20-MUL WEB
Published on

ಮುಳಗುಂದ: ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಫೆ. 21ರಿಂದ 23ರವರೆಗೆ ನೆರವೇರಲಿದೆ. ಈ ನಿಮಿತ್ತ ವಿವಿಧ ಧಾರ್ಮಿಕ ಜರುಗಲಿವೆ.
ಶ್ರೀಗಳ ಚರಿತ್ರೆ: ಬಾಲಲೀಲಾ ಮಹಾಂತ ಶಿವಯೋಗಿಗಳು ವಿಜಯಪುರ ಜಿಲ್ಲೆ ಯರನಾಳ ಗ್ರಾಮದಲ್ಲಿ 1823ರಲ್ಲಿ ಜನ್ಮ ತಾಳಿದರು. ಕೆಲ ವರ್ಷ ಯರನಾಳ ಹಿರೇಮಠದಲ್ಲಿದ್ದರು. 8ನೇ ವಯಸ್ಸಿಗೆ ಬಾಲಕ ಮಹಾಂತೇಶನು ಕಡು ವೈರಾಗ್ಯ ತಾಳಿ, ಶಿವಕ್ಷೇತ್ರಗಳನ್ನು ಸಂಚರಿಸುತ್ತ ಬಳ್ಳಾರಿ ಜಿಲ್ಲೆಯ ಲಿಂಗನಾಯಕನಹಳ್ಳಿಯ ಅನುಭಾವಿ ಹಾಲಹರ್ತಿಯ ಶ್ರೀ ಚನ್ನವೀರ ಮಹಾಶಿವಯೋಗಿಗಳ ಮಠಕ್ಕೆ ತೆರಳಿ ದರ್ಶನ ಪಡೆದರು. ಅವರ ಶಿಷ್ಯೋತ್ತಮರಲ್ಲಿ ಒಬ್ಬರಾದ ಶ್ರೀ ಶಾಂತವೀರ ಚರಮೂರ್ತಿಗಳಿಂದ ಅನುಗ್ರಹ ಹಾಗೂ ಷಟ್‌ಸ್ಥಲ ಬ್ರಹ್ಮೋಪದೇಶ ಪಡೆದರು.
ಹೀಗೆ ಸಂಚರಿಸುತ್ತ ಸಾಗಿದ ಮಹಾಂತೇಶ್ವರರು ಭಕ್ತರ ಭಿನ್ನಹದ ಮೇರೆಗೆ ಮುಳಗುಂದ ಗವಿಮಠದಲ್ಲಿ ಬಂದು ನೆಲೆಸಿದರು. ಮಹಾಮಾತೆ ಬಸವಾಂಬೆಯ ಪ್ರೀತಿಯ ಪುತ್ರನಾಗಿ ಬಾಲಲೀಲೆಗಳನ್ನು ತೋರಿದರು.
ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ ಪ್ರಾರ್ಥನೆ ಪರಿಗಣಿಸಿ, ಅವರಿಗೆ ಒದಗಿದ್ದ ಮಹಾರೋಗವನ್ನು ಪರಿಹರಿಸಿದರು. ಅರಸರು ಅರ್ಪಿಸಿದ ಮುತ್ತುರತ್ನಗಳನ್ನು ಬದಿಗಿಟ್ಟು, ಒಂದು ಕುಂಬಳಕಾಯಿ ಬುರುಡೆಯನ್ನು ಮಾತ್ರ ಸ್ವೀಕರಿಸಿದರೆಂಬುದೇ ವಿಶೇಷ. ಅಂದು ಪಡೆದ ಆ ಕುಂಬಳಕಾಯಿಯ ಬುರುಡೆ ಶ್ರೀಮಠದಲ್ಲಿ ಇಂದಿಗೂ ನೋಡಲು ಸಿಗುತ್ತದೆ.
ಮಹಾಂತ ಶಿವಯೋಗಿಗಳು ಬರೆದ ತಮ್ಮ ಕೈವಲ್ಯ ದರ್ಪಣದಲ್ಲಿ ‘ವಿಷಯಗಳು ಮನಸ್ಸಿನ ನೆಮ್ಮದಿ ಕೆಡಿಸುತ್ತವೆ. ಅತ್ತಿತ್ತ ಹರಿಯುವ ಮನವನ್ನು ಗೆಲ್ಲುವುದು ಕಡುಕಷ್ಟ. ಸುಜ್ಞಾನ ಜಲವನ್ನು ಎರೆದು ರಕ್ಷಿಸು’ ಎಂದು ಭಗವಂತನನ್ನು ಪ್ರಾರ್ಥಿಸಿದ್ದರು. ‘ಮನಸು ಮರ್ಕಟ, ಬುದ್ಧಿ ಅಂಕುಶ, ಸಂಚಲತೆ ಮನಸಿನ ನಿಜ ನಿಯಮ. ಲೋಕಮುಖವಾಗಿ, ಅಧೋಗತಿಗೆ ಹೋಗುವ ಮನಸ್ಸನ್ನು ತಡೆ ಹಿಡಿಯಬೇಕು. ಮನ ಉನ್ಮನವಾಗಬೇಕು, ಕ್ಷಣ ಮನವಾಗಬೇಕು.’ ಎಂದು ಬರೆದಿದ್ದಾರೆ.
ಪವಾಡಗಳು: ಮಹಾಂತ ಶಿವಯೋಗಿಗಳು ಅನೇಕ ಲೀಲೆಗಳನ್ನು ಮಾಡಿದ್ದಾರೆ. ಒಮ್ಮೆ ನೀರಲ್ಲಿ ಮುಳುಗಿದ ಲಿಂಗವನ್ನು ಮೇಲೆ ತರಿಸಿದರು. ನೀರಿಲ್ಲದ ಬಾವಿಯಲ್ಲಿ ಸಿಹಿ ನೀರು ಬರುವಂತೆ ಮಾಡಿದರು. ಟೊಪ್ಪಿಗೆಯಲ್ಲಿ ಕುಳಿತು ಹೊಳೆ ದಾಟಿದರು. ಮುಳಗುಂದದ ಭಕ್ತರಿಗೆ ಗವಿಮಠದಲ್ಲಿಯೇ ಉಳವಿ ಚನ್ನಬಸವೇಶ್ವರರ ಜಾತ್ರೆಯ ದರ್ಶನ ಮಾಡಿಸಿದರು.
ಮಹಾಂತೇಶ್ವರರು ಅಂತಃಸ್ಫೂರ್ತಿ ಬಂದಾಗ ಶ್ರೀಮಠದ ತೊಲೆ, ಬೋಧಿಗೆಯ ಮೇಲೆ ಬರೆದ ಅಂದಿನ ಹಾಡುಗಳನ್ನು ಸಂಗ್ರಹಿಸಿ, ಸಂರಕ್ಷಿಸಿರುವ ಅವರ ನೆಚ್ಚಿನ ಶಿಷ್ಯ ಶ್ರೀ ಮರಿದೇವರನ್ನು ನಾವು ಸ್ಮರಿಸಲೇಬೇಕು. ಆ ಹಾಡುಗಳ ಸಂಗ್ರಹ ಕೈವಲ್ಯ ದರ್ಪಣವೆಂದು ಪ್ರಸಿದ್ಧಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net