ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಟೊಮ್ಯಾಟೊ ಬೆಳೆಗಾರರಿಗೆ ಶುಕ್ರದೆಸೆ

26 mbl ph 1
Published on

ಮುಳಬಾಗಿಲು: ಕರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಟೊಮ್ಯಾಟೊ ಬೆಳೆಗಾರರು ಇದೀಗ ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆ ಟೊಮ್ಯಾಟೊ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಬೆಲೆಯಿಲ್ಲದೆ ಕಂಗಲಾಗಿದ್ದ ರೈತರಿಗೆ ಈಗ ಶುಕ್ರದೆಸೆ ಬಂದಿದೆ.

ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಟೊಮ್ಯಾಟೊ ದೂರ ಪ್ರದೇಶಗಳಿಗೆ ಸಾಗಾಣಿಕೆಯಾಗದೆ ಸ್ಥಳೀಯವಾಗಿ ಬೇಡಿಕೆ ಇಲ್ಲದೆ ಬೆಳೆಗಾರರು ಕಳೆದೆರಡು ತಿಂಗಳಿಂದ ಬೀದಿಗೆ ಬಿದ್ದಿದ್ದರು. ಗುಣಮಟ್ಟದ 15 ಕೆಜಿ ಬಾಕ್ಸ್ ಒಂದಕ್ಕೆ 20ರಿಂದ 30 ರೂ.ಗೆ ಮಾರಾಟ ಮಾಡಬೇಕಾಗಿತ್ತು. ಕನಿಷ್ಠ ಕಾಯಿ ಕಿತ್ತು ಮಾರುಕಟ್ಟೆಗೆ ಸಾಗಿಸುವ ಕೂಲಿ ಸಹ ಸಿಗದೆ ರೈತ ತತ್ತರಿಸಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಲಾಕ್‌ಡೌನ್ ಸಡಿಲಗೊಳಿಸಿದ್ದು, ದೂರದ ಪ್ರದೇಶಗಳಿಗೆ ಟೊಮ್ಯಾಟೊ ಲಾರಿಗಳಲ್ಲಿ ಪೂರೈಕೆಯಾಗುತ್ತಿದ್ದು ದಿಢೀರ್ ಬೇಡಿಕೆಯುಂಟಾಗಿ ಒಂದಷ್ಟು ಬೆಲೆ ಬಂದಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

70 ಲೋಡ್ ಪೂರೈಕೆ: 15 ಕೆಜಿ ಬಾಕ್ಸ್ ಒಂದಕ್ಕೆ 50ರಿಂದ 120 ರೂ. ವರೆಗೂ ಎನ್.ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ದೂರದ ಛತ್ತೀಸ್‌ಗಢ ಸೇರಿ ಚೆನ್ನೈ, ಮಧುರೈ ಮತ್ತಿತರೆಡೆ ಪ್ರತಿನಿತ್ಯ ವಡ್ಡಹಳ್ಳಿಯಿಂದ 50ರಿಂದ 70 ಲಾರಿ ಲೋಡ್‌ಗಳಲ್ಲಿ ಟೊಮ್ಯಾಟೊ ಪೂರೈಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಭಾರತದ ಕಡೆ ಪೂರೈಕೆಯಾದರೆ ಮತ್ತಷ್ಟು ಬೆಲೆ ಏರಿಕೆ ಕಾಣಲಿದೆ. ಬೇಸಿಗೆ ತಾಪಮಾನ 35 ಡಿಗ್ರಿಗೂ ಹೆಚ್ಚಾಗಿದ್ದು ನೀರಿನ ಅಭಾವದ ನಡುವೆ ಕೃಷಿಕರು 1500 ಅಡಿಗೂ ಹೆಚ್ಚು ಅಂತರದಿಂದ ಕೊಳವೆಬಾವಿ ಮೂಲಕ ನೀರು ಮೇಲೆತ್ತಿ ಹನಿ ನೀರಾವರಿ ಮೂಲಕ ಹಣ್ಣು ಮತ್ತು ತೋಟಗಾರಿಕೆ ಬೆಳೆ ಮಾಡುತ್ತಿದ್ದು, ಬೆಲೆಯಿಲ್ಲದೆ ನೆಲ ಕಚ್ಚಿದ್ದರು. ಈಗ ಪೂರೈಕೆ ಜತೆಗೆ ಬೆಡಿಕೆಯೂ ಹೆಚ್ಚಿರುವುದರಿಂದ ಬೆಳೆ ಇರುವ ರೈತರಿಗೆ ಶುಕ್ರ ದೆಸೆ ಆರಂಭವಾಗುತ್ತಿದೆ.

ಮತ್ತೆ ತೋಟದತ್ತ ಗಮನ: ಒಂದು ಎಕರೆ ಟೊಮ್ಯಾಟೊ ಬೆಳೆಯಲು ಒಂದೂವರೆ ಲಕ್ಷಕ್ಕೂ ಅಧಿಕ ಹಣ ವೆಚ್ಚವಾಗುತ್ತಿದ್ದು, ಬೆಳೆಗಾರರು ನಷ್ಟದಲ್ಲಿದ್ದಾರೆ. ಈಗ ಟೊಮ್ಯಾಟೊ ಸೇರಿ ತರಕಾರಿ ಬೆಳೆಗಳ ಬಗ್ಗೆ ಹೆಚ್ಚು ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದ ರೈತರೂ ತೋಟಗಳ ನಿರ್ವಹಣೆ ಬಗ್ಗೆ ಕಾಳಜಿ ವಹಿಸಿ ಒಂದಷ್ಟು ಕಾಸು ಮಾಡಿಕೊಳ್ಳುವ ಕಡೆಗೆ ಗಮನಹರಿಸಿದ್ದಾರೆ.

2 ತಿಂಗಳಿನಿಂದ ಟೊಮ್ಯಾಟೊ ಬೆಲೆಯಿಲ್ಲದೆ ರೈತರು ಸಾಲದ ಹೊರೆಗೆ ಸಿಲುಕಿದ್ದಾರೆ. ಎಕರೆಗೆ ಒಂದೂವರೆ ಲಕ್ಷ ಬಂಡವಾಳ ಹಾಕಿದ್ದರೂ ಕೈಗೆ ಬಂದ ಫಲ ಬಾಯಿಗೆ ಬರದ ಪರಿಸ್ಥಿತಿಯಿಂದ ನಷ್ಟಕ್ಕೆ ಒಳಗಾಗಿದ್ದಾರೆ. ಎರಡು ದಿನಗಳಿಂದ ಬೆಲೆ ಏರಿಕೆಯಾಗಿದ್ದು, ಬೆಳೆ ಇರುವ ರೈತರಿಗೆ ಅನುಕೂಲವಾಗಲಿದೆ. ನಗವಾರ ಎನ್.ಆರ್.ಸತ್ಯಣ್ಣ, ಎಪಿಎಂಸಿ ನಿರ್ದೇಶಕ ಮುಳಬಾಗಿಲು ಎನ್.ವಡ್ಡಹಳ್ಳಿ ಮಾರುಕಟ್ಟೆಯಲ್ಲಿ 2 ದಿನಗಳಿಂದ ಟೊಮ್ಯಾಟೊಗೆ ಬೆಲೆ ಸಿಕ್ಕಿದೆ. ಛತ್ತೀಸ್‌ಗಢ ಮತ್ತು ತಮಿಳುನಾಡಿಗೆ ಹೆಚ್ಚಿನ ಸಾಗಾಣಿಕೆಯಾಗುತ್ತಿದೆ. 50ರಿಂದ 120 ರೂ. ವರೆಗೂ 15 ಕೆಜಿ ಬಾಕ್ಸ್ ಟೊಮ್ಯಾಟೊ ಖರೀದಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಎಂ.ಪ್ರಭಾಕರ್, ಎನ್.ವಡ್ಡಹಳ್ಳಿ ಮಂಡಿ ಮಾಲೀಕರ ಸಂಘದ ಕಾರ್ಯದರ್ಶಿ ಟೊಮ್ಯಾಟೊ ಬೆಳೆಗೆ ಬೆಲೆ ಸಿಕ್ಕಿರುವುದರಿಂದ ಒಂದಷ್ಟು ಸಾಲ ತೀರಿಸಬಹುದು. ಹಿಂದಿನ ಬೆಳೆಗಳಿಗೆ ಬೆಲೆ ಸಿಗದೆ ನಷ್ಟ ಉಂಟಾಗಿತ್ತು. ಸುಬ್ರಹ್ಮಣ್ಯ, ಗೋಪಾಲಪುರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net