

ಲಕ್ಷ್ಮೇಶ್ವರ: ಮಾನವ ಧರ್ಮಕ್ಕೆ ಜಯವಾಗಲಿ-ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ವಿಶ್ವಶಾಂತಿ ಸಂದೇಶ ಸಾರಿದ ಲಿಂ. ವೀರಗಂಗಾಧರ ಜಗದ್ಗುರುಗಳ ಸತ್ಯಶುದ್ಧ ಸಂಕಲ್ಪದಿಂದ ಅವರ ತಪೋಭೂಮಿಯಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯಾಗಿ ವಿಶ್ವ ಧಾರ್ಮಿಕ ಕ್ಷೇತ್ರವಾಗಿ ಪರಿಣಮಿಸಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಲಕ್ಷ್ಮೇಶ್ವರ ಸಮೀಪದ ಭೂಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಮಹೋನ್ನತ ಕಾರ್ಯಕ್ಕೆ ಬುಧವಾರ ಭೂಮಿಪೂಜೆ ನೇರವೇರಿಸಿದ ನಂತರ ಆಯೋಜಿಸಿದ್ದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಲಿಂ. ವೀರಗಂಗಾಧರ ಜಗದ್ಗುರುಗಳ ತಪೋಭೂಮಿ ಮುಕ್ತಿಮಂದಿರಕ್ಕೆ ಬರದಿದ್ದರೆ ಮುಕ್ತಿ ಇಲ್ಲ. ಹುಟ್ಟು ಸಾವಿನ ಬದುಕಿನ ನಡುವೆ ನ್ಯಾಯ, ನೀತಿ, ಧರ್ಮ, ಸಂಸ್ಕಾರ, ಮಾನವೀಯ ಮೌಲ್ಯದಿಂದ ಬದುಕಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಪವಿತ್ರ ಧಾರ್ಮಿಕ ಕ್ಷೇತ್ರವಾಗಿ ಜಗ ಬೆಳಗಲಿದೆ. ನಡೆದಾಡುವ ದೇವರೆಂದೇ ಹೆಸರಾದ ಲಿಂ.ಜಗದ್ಗುರುಗಳ ವಾಣಿ ವಿಶ್ವಮಾನ್ಯವಾಗಿದೆ. ಶ್ರೀಗಳ ತಪಃಶಕ್ತಿಯಿಂದ ಲೋಕಕಲ್ಯಾಣವಾಗಲಿದೆ’ ಎಂದರು.
ಈ ಪುಣ್ಯ ಭೂಮಿಯಲ್ಲಿ ಜನಿಸಿದ ಬೊಮ್ಮಾಯಿ ಕುಟುಂಬವೂ ಶ್ರೀಮಠದ ಭಕ್ತ ಪರಂಪರೆಗೆ ಸೇರಿದೆ. ದಿ.ಎಸ್.ಆರ್.ಬೊಮ್ಮಾಯಿಯವರು 1962ರಲ್ಲಿ ರಾಜಕೀಯಕ್ಕೆ ಬರುವಂತೆ ಆಜ್ಞೆ ಮಾಡಿದ್ದ ಶ್ರೀಗಳು ಮುಂದೆ ಅವರು ಮುಖ್ಯಮಂತ್ರಿಯಾಗಲು ಸಹ ಹಾರೈಸಿದ್ದರು. ಅರಮನೆಯಲ್ಲಿ ತಪ್ಪು ನಡೆದಾಗ ತಿದ್ದುವ ಅಧಿಕಾರ ಗುರುಮನೆಗೆ ಇರುತ್ತದೆ. ಅಂತಹ ಶಕ್ತಿ ಗಂಗಾಧರ ಅಜ್ಜನಿಗಿತ್ತು. ಧರ್ಮ ಎಂದರೆ ಹಿಂಸಾಚಾರ ಮತ್ತು ಭಯೋತ್ಪಾದನೆ ಅಲ್ಲ, ಎಲ್ಲಿ ಭಯೋತ್ಪಾದನೆ, ಹಿಂಸೆ, ಅನ್ಯಾಯ, ಅಸತ್ಯ ಇದೆಯೋ ಅಲ್ಲಿ ಧರ್ಮ ಇರುವದಿಲ್ಲ ಎಂಬುದನ್ನು ಅರಿತು ಬದುಕಬೇಕು. ಗುರು ತೋರಿದ ಮಾರ್ಗದಲ್ಲಿ ಎಲ್ಲರೂ ನಡೆಯೋಣ. ಮುಕ್ತಿಮಂದಿರ ಧರ್ಮಕ್ಷೇತ್ರದ ಅಭಿವೃದ್ಧಿಗೆ ಶ್ರೀಗಳ ಪ್ರೇರಣೆಯಂತೆ 21 ಲಕ್ಷ ರೂ. ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ನೊಣವಿನಕೇರಿ ಶ್ರೀಗಳನ್ನು ಸಂಬೋಧಿಸಿ ಮಾತನಾಡಿದ ಬೊಮ್ಮಾಯಿ, ‘ಏನಜ್ಜಾ… ಎಲ್ಲರೂ ನಿನ್ನ ಮಠಕ್ಕೆ ಮುಗಿಬಿದ್ದಿದ್ದಾರೆ. ಯಾರು ಏನೆಲ್ಲ ಆಣಿ ಮಾಡಿದರೂ ನಿನ್ನ ಮೇಲೆಯೇ ಮಾಡುತ್ತಾರೆ. ನಿನ್ನನ್ನೂ ಬಿಡವಲ್ರು ನೋಡು ಅಜ್ಜ… ಅದು ನಿಜ ಇದ್ದು ಆಣಿ ಮಾಡಿದರೆ ಪರವಾಗಿಲ್ಲ. ಸುಳ್ಳು ಹೇಳಿ ಆಣಿ ಮಾಡಿದರೆ ಏನು ಮಾಡಬೇಕು. ನಮ್ಮ ಪಾಪ-ಪುಣ್ಯ, ಕರ್ಮ-ಧರ್ಮ ಸುಳ್ಳು-ಸತ್ಯ, ನ್ಯಾಯ-ನೀತಿಯ ಫಲ ನಮ್ಮ ಅಕೌಂಟ್‌ಗೇ ಸೇರುತ್ತದೆ’ ಎಂದಿದ್ದು ಅನ್ಯರಿಗೆ ಟಾಂಗ್ ಕೊಟ್ಟಂತೆ ಕಂಡು ಬಂತು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ‘ಲಿಂ.ಶ್ರೀ ವೀರಗಂಗಾಧರ ಜಗದ್ಗುರುಗಳ ತಪಃಶಕ್ತಿಯಿಂದಲೇ ಪುಣ್ಯ ಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಕಾರ್ಯ ನಡೆಯಲು ಸಾಧ್ಯವಾಗಿದೆ. ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಲಿಂ.ಶ್ರೀಗಳ ಹಾಗೂ ಎಲ್ಲ ಮಠಾಧೀಶರ ಕೃಪೆಯಿಂದ ಉತ್ತಮ ಮಳೆ-ಬೆಳೆಯಾಗಲಿ, ಜನರ ಕಷ್ಟಗಳು ಪರಿಹಾರವಾಗುವಂತೆ ಆಶೀರ್ವದಿಸಲಿ. ತ್ರಿಕೋಟಿ ಲಿಂಗ ಸ್ಥಾಪನೆಯ ನಂತರ ಇದೊಂದು ವಿಶ್ವ ಧಾರ್ಮಿಕವಾಗಲಿದೆ ನೊಣವಿನಕೇರಿ ಶ್ರೀಗಳ ದಿವ್ಯಶಕ್ತಿ, ಪ್ರಭಾವ ರಾಜ್ಯಾದ್ಯಂತ ಪಸರಿಸಿದೆ. ಗಂಗಾಧರ ಜಗದ್ಗುರುಗಳ ಆಶೀರ್ವಾದ, ಇಚ್ಛಾಶಕ್ತಿ, ಸಹಕಾರದಿಂದ ಈ ಪುಣ್ಯ ಕಾರ್ಯ ಸಾಗರೋಪಾದಿಯಲ್ಲಿ ನಡೆಯಲಿದೆ ಎಂದರು.
ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ವಿವಿಧ ಮಠಾಧೀಶರು, ಶಾಸಕರು, ರಾಜಕೀಯ ಮುಖಂಡರು ಇತರರಿದ್ದರು.