

ವಿಜಯವಾಣಿ ಸುದ್ದಿಜಾಲ ಧಾರವಾಡ
ಒಂದೇ ಓದಿಗೆ ಇಡೀ ಪುಸ್ತಕ ಓದಬೇಕೆನಿಸುವ ಅತ್ಯಪೂರ್ವ ಕೃತಿ ಹಿರಿಯ ಪತ್ರಕರ್ತ ಮನೋಜ ಪಾಟೀಲರ "ಮುಕ್ತ' ಎಂದು ಹೇಳಬಹುದು. ಈ ಕೃತಿಯ ಮುಕ್ಕಾಲು ಪಾಲು ಪ್ರಬಂಧಗಳು ವ್ಯಕ್ತಿ ಚಿತ್ರಣಗಳೇ ಆಗಿದ್ದು, ಅವೆಲ್ಲವೂ ಒಂದಲ್ಲ ಒಂದು ರೀತಿ ಹಿರಿಯ ಸಾಧಕರ ಸತತ ಪರಿಶ್ರಮ, ಪ್ರಾಮಾಣಿಕತೆ, ಶುದ್ಧ ಹಸ್ತ, ಇತರ ಅಪೂರ್ವ ಸಾಧನೆಗಳ ಸಂಗಮವಾಗಿ ಚಿತ್ರಿತಗೊಂಡಿವೆ ಎಂದು ಲೇಖಕ ಡಾ. ಶ್ರೀಧರ ಹೆಗಡೆ ಭದ್ರನ್ ಹೇಳಿದರು.
ನಗರದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟ ವತಯಿಂದ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪುಸ್ತಕ ಸಮೀಕ್ಷೆ ಮಾಸಿಕ ಕಾರ್ಯಕ್ರಮದಲ್ಲಿ ಪತ್ರಕರ್ತ ಮನೋಜ ಪಾಟೀಲರ "ಮುಕ್ತ' ಪ್ರಬಂಧ ಸಂಕಲನ ಕುರಿತು ಮಾತನಾಡಿದರು.
ಹಿಂದಿನ ಕಾಲದ ಧಾರವಾಡದ ಏರಿಳಿವುಗಳಿಂದ ಕೂಡಿದ ನೈಸರ್ಗಿಕ ಚೆಲುವು, ಆಕಾಶ ಮಲ್ಲಿಗೆ, ಸಂಪಿಗೆ ಹೂಗಳ ಕೆಂಪು, ಲೈನ್ಬಜಾರ್ ಪೇಢೆ ರುಚಿ, ಸಾಹಿತಿಗಳ ದೊಡ್ಡಬಳಗ, ವಾಮನಂದರಾವ್ ಮಾಸ್ತರ ನಾಟಕಗಳು ಇಂತಹ ಹಲವಾರು ಸವಿನೆನಪಿನ ರಾಶಿ ಹೊತ್ತ ಬಲು ಅಪರೂಪದ ಸ್ವಾದಿಷ್ಟ ಗ್ರಂಥವಿದು ಎಂದರು.
ಕವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಜೆ.ಎಂ. ಚಂದೂನವರ, ಪತ್ರಕರ್ತ ಡಾ. ಬಸವರಾಜ ಹೊಂಗಲ ಮಾತನಾಡಿದರು. ಕೃತಿಕಾರ ಮನೋಜ ಪಾಟೀಲ ಅನಿಸಿಕೆ ಹಂಚಿಕೊಂಡರು. ಜಿ.ಸಿ.ತಲ್ಲೂರ ಅಧ್ಯಕ್ಷತೆ ವಹಿಸಿದ್ದರು.
ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ, ಪರಾಂಜಪೆ, ವೆಂಕಟೇಶ ದೇಸಾಯಿ, ಹ.ವೆಂ. ಕಾಖಂಡಿಕಿ, ಡಾ. ಕೃಷ್ಣ ಕಟ್ಟಿ, ಮಹಾಬಲೇಶ್ವರ ಸಿಂದಗಿ, ರಾಜೀವ ಪಾಟೀಲಕುಲಕರ್ಣಿ, ಪ್ರೊ. ಹರ್ಷ ಡಂಬಳ, ಆನಂದ ಕುಲಕರ್ಣಿ, ಎಸ್.ಟಿ. ಸುಬ್ರಾಯ, ರಮೇಶ ನಾಡಿಗೇರ, ಎಸ್.ಬಿ. ದ್ವಾರಪಾಲಕ, ಶ್ರೀಪಾದ ನಾಡಿಗೇರ, ಎಸ್.ಎಂ. ದೇಶಪಾಂಡೆ, ಶೈಲಜಾ ಪಾಟೀಲ, ಇತರರು ಇದ್ದರು.