ಮೇಲುಕೋಟೆ ಸನ್ನಿಧಿಯಲ್ಲಿ ಮುಕ್ಕೋಟಿ ದ್ವಾದಶಿ ಸಂಭ್ರಮ

11
ಮೇಲುಕೋಟೆ ಶ್ರೀ ಚೆಲ್ವತಿರುನಾರಾಯಣಸ್ವಾಮಿಗೆ ಮುಕ್ಕೋಟಿ ದ್ವಾದಶಿಯ ಪ್ರಯುಕ್ತ ಬಂಗಾರದ ಕವಚ ಧಾರಣೆ ಮಾಡಲಾಗಿತ್ತು
Published on

ಮೇಲುಕೋಟೆ : ಭೂ ವೈಕುಂಠವಾದ ಮೇಲುಕೋಟೆಯ ಶ್ರೀ ಚೆಲ್ವತಿರುನಾರಾಯಣಸ್ವಾಮಿಗೆ ಮುಕ್ಕೋಟಿ ದ್ವಾದಶಿಯ ಅಂಗವಾಗಿ ಶನಿವಾರ ಬಂಗಾರದ ಕವಚಧಾರಣೆಯೊಂದಿಗೆ ವಿಶೇಷ ಪೂಜೆ ನೆರವೇರಿತು.

ನಾರಾಯಣನ ದರ್ಶನಕ್ಕೆ ಪ್ರಶಸ್ತ ದಿನವಾದ ಶನಿವಾರವೂ ಇದ್ದುದರಿಂದ ಕಾರಣ ಸಹಸ್ರಾರು ಭಕ್ತರು ಆಗಮಿಸಿ ದೇವರದರ್ಶನ ಪಡೆದು ಪುನೀತರಾದರು. ಮೇಲುಕೋಟೆಯ ಚೆಲುವನಾರಾಯಣಸ್ವಾಮಿಯ ಸನ್ನಿಧಿಯೇ ನಿತ್ಯವೈಕುಂಠವಾದ ಕಾರಣ ಸ್ವಾಮಿ ಸನ್ನಿಧಿಯಲ್ಲಿ ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆಗೆಯುವ ಪದ್ಧತಿ ಹಾಗೂ ವಿಶೇಷ ಆಚರಣೆ ಇಲ್ಲ. ಆದರೆ ದ್ವಾದಶಿಯಂದು ಚೆಲುವನಾರಾಯಣಸ್ವಾಮಿಗೆ ಮಹಾರಾಜರು ಸಮರ್ಪಿಸಿರುವ ಬಂಗಾರದ ಕವಚವನ್ನು ಧರಿಸುವ ಸಂಪ್ರದಾಯವಿದ್ದು, ಬೊಕ್ಕಸದಲ್ಲಿ ಇಡಲಾಗಿದ್ದ ಬಂಗಾರದ ಕವಚವನ್ನು ಸ್ಥಾನೀಕರು ಅರ್ಚಕ ಪರಿಚಾರಕರ ಸಮಕ್ಷಮದಲ್ಲಿ ತೆಗೆದು ಪರಿಶೀಲಿಸಿ ಸ್ವಾಮಿಗೆ ಧರಿಸಿ ವಿಶೇಷ ಪೂಜೆ ನೆರವೇರಿಸಿದರು.

ದ್ವಾದಶಿಯ ಸಂಜೆ ಚೆಲುವನಾರಾಯಣಸ್ವಾಮಿಗೆ ಕೊಠಾರೋತ್ಸವ ವೈಭವದಿಂದ ನೆರವೇರಿತು. ಸಂಜೆ 8ನೇ ದಿನದ ಕೊಠಾರೋತ್ಸವ ನಡೆದ ನಂತರ ಆಂಡವನ್ ಆಶ್ರಮದ ವತಿಯಿಂದ ಪುಷ್ಪ ಕೈಂಕರ್ಯ ನಡೆಯಿತು.

ಮಕರ ಸಂಕ್ರಾಂತಿ ಮತ್ತು ಅಂಗಮಣಿ ಉತ್ಸವ : ಚೆಲುವನಾರಾಯಣಸ್ವಾಮಿಗೆ ಜ.14 ರಂದು ಮಕರ ಸಂಕ್ರಾಂತಿ ಹಬ್ಬದ ವಿಶೇಷ ಉತ್ಸವ ನಡೆಯಲಿದೆ. ಅದರ ಮರುದಿನ ಕನೂ ಹಬ್ಬದ ಅಂಗವಾಗಿ ಜ.15ರಂದು ಪ್ರಖ್ಯಾತ ಅಂಗಮಣಿ ಉತ್ಸವ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಅಭಿಷೇಕ ನಂತರ ಕಲ್ಯಾಣಿಗೆ ಉತ್ಸವ ನಡೆದರೆ ರಾತ್ರಿ 7ಗಂಟೆಗೆ ತವರುಮನೆ ಉತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net