ಪ್ರವಾಸಿಗರ ನೆಚ್ಚಿನ ಕೋಟೆ ಅಬ್ಬಿ ಬಂದ್

27mdks1 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿನ ಪ್ರಮುಖ ಪ್ರವಾಸಿ ತಾಣ ಮಾಂದಲಪಟ್ಟಿ ಹಾಗೂ ಕೋಟೆ ಬೆಟ್ಟಕ್ಕೆ ತೆರಳುವ ಬಹುತೇಕ ಪ್ರವಾಸಿಗರು ಹಚ್ಚಹಸಿರ ಪ್ರಕೃತಿ ಸೊಬಗಿನ ಕೋಟೆ ಅಬ್ಬಿ (ಜಲಪಾತ) ವೀಕ್ಷಿಸಲು ತೆರಳುತ್ತಿದ್ದರು. ಆದರೆ, ಕಳೆದ ೩ ತಿಂಗಳಿನಿಂದ ಕೋಟೆ ಅಬ್ಬಿ ಪ್ರವೇಶಕ್ಕೆ ನಿಬರ್ಂಧ ವಿಧಿಸಿರುವುದರಿಂದ ತೀವ್ರ ನಿರಾಶೆ ಅನುಭವಿಸುವಂತಾಗಿದೆ.

ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಂಡಿ ಗ್ರಾಮದಲ್ಲಿ ಕೋಟೆ ಅಬ್ಬಿ ಇದೆ. ಈ ಜಲಪಾತ ಅಧಿಕೃತವಾಗಿ ಕೊಡಗಿನ ಪ್ರವಾಸೋದ್ಯಮ ಭೂಪಟದಲ್ಲಿ ಇಲ್ಲದಿದ್ದರೂ ಪ್ರವಾಸಿಗರ ನೆಚ್ಚಿನ ಆಜ್ಞಾತ ಪ್ರವಾಸಿ ತಾಣ. ಇದುವರೆಗೆ ಮೈಮರೆತ ಐವರು ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ.

ಮೂರು ತಿಂಗಳ ಹಿಂದೆ ಹೈದರಾಬಾದ್‌ನ ಮೂವರು ಪ್ರವಾಸಿಗರು ದೇವರ ಗುಂಡಿಯಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಬಳಿಕ ಕೋಟೆ ಅಬ್ಬಿ ಜಲಪಾತ ವೀಕ್ಷಣೆಗೆ ತಡೆವೊಡ್ಡಲಾಗಿದೆ. ಗ್ರಾಮಸ್ಥರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮಕ್ಕಂದೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಜಲಪಾತ ವೀಕ್ಷಣೆಗೆ ತಡೆವೊಡ್ಡಲಾಗಿದೆ.

ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ಕರೆದುಕೊಂಡು ಬರುವ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲುಗಡೆ ಮಾಡಬೇಕಾಗಿತ್ತು. ವಾಹನ ನಿಲುಗಡೆಗೆ ಸರ್ಕಾರಿ ಜಾಗ ಲಭ್ಯವಿಲ್ಲ. ಅಕ್ಕಪಕ್ಕದಲ್ಲಿರುವ ಖಾಸಗಿ ಜಾಗದಲ್ಲಿ ವಾಹನ ನಿಲುಗಡೆಗೆ ಸ್ಥಳೀಯರು ಅವಕಾಶ ನೀಡುತ್ತಿ
ಲ್ಲ. ಇದರೊಂದಿಗೆ ಅಗತ್ಯ ಮೂಲಭೂತ ಸವಲತ್ತು ಒದಗಿಸದ್ದರಿಂದ ವಾಹನ ನಿಲುಗಡೆ ಶುಲ್ಕ ವಸೂಲಾತಿ ಮಾಡುವುದನ್ನು ನಿಲ್ಲಿಸಲಾಗಿದೆ.

ವಾಹನ ನಿಲುಗಡೆ ಶುಲ್ಕ ವಸೂಲಾತಿ ಮಾಡುವ ಜವಾಬ್ದಾರಿಯನ್ನು ಸ್ಥಳೀಯ ವ್ಯಕ್ತಿಯೊಬ್ಬರಿಗೆ ನೀಡಲಾಗಿತ್ತು. ಇವರಿಗೆ ಮಾಸಿಕ ೪,೫೦೦ ರೂ. ವೇತನ ನೀಡಲಾಗುತ್ತಿತ್ತು. ಇದರೊಂದಿಗೆ ಸ್ವಚ್ಛತೆ ಕೆಲಸಕ್ಕಾಗಿ ಮಾಸಿಕ ೫೦೦ ರೂ. ನೀಡಲಾಗುತ್ತಿತ್ತು. ೨ ವರ್ಷ ಶುಲ್ಕ ವಸೂಲಾತಿ ಪ್ರಕ್ರಿಯೆ ನಡೆದಿತ್ತು. ವಾರ್ಷಿಕವಾಗಿ ೭೫ ರಿಂದ ೧ ಲಕ್ಷ ರೂ. ಆದಾಯ ಗ್ರಾಪಂಗೆ ಸಂದಾಯವಾಗುತ್ತಿತ್ತು.

ವಾಹನ ನಿಲುಗಡೆ ಶುಲ್ಕ ವಸೂಲಾತಿ ಜವಾಬ್ದಾರಿ ಹೊತ್ತುಕೊಂಡಿದ್ದ ವ್ಯಕ್ತಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ದೂರು ಗ್ರಾಮಸ್ಥರಿಗೆ ಲಿಖಿತವಾಗಿ ಗ್ರಾಪಂಗೆ ಸಲ್ಲಿಕೆಸಲಾಯಿತು. ಇದರೊಂದಿಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಾರದೇ ಡ್ರೋಣ್ ಚಿತ್ರೀಕರಣ ಮಾಡಲು, ಶೂಟಿಂಗ್ ಮಾಡಲು ಅವಕಾಶ ನೀಡುತ್ತಿದ್ದಾರೆಂದು ಆಕ್ಷೇಪ ವ್ಯಕ್ತವಾಗಿತ್ತು.

ಮಕ್ಕಂದೂರು ಗ್ರಾಮಸಭೆಯಲ್ಲಿ ಆವಂಡಿ ಗ್ರಾಮಸ್ಥರ ದೂರಿನ ಬಗ್ಗೆ ಚರ್ಚಿಸಲಾಯಿತು. ಸ್ಥಳೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡುವುದನ್ನು ನಿಲ್ಲಿಸುವ ನಿರ್ಧಾರಕ್ಕೆ ಮಕ್ಕಂದೂರು ಗ್ರಾಪಂ ಬಂತು. ತದನಂತರ ಸ್ಥಳೀಯರು ಎರಡು ಪ್ರವೇಶ ದ್ವಾರ ಬಂದ್ ಮಾಡಿದರು.

ಗ್ರಾಮಸ್ಥರ ಪವಿತ್ರ ಸ್ಥಳ
ಆವಂಡಿ ಗ್ರಾಮಸ್ಥರ ಪಾಲಿಗೆ ಕೋಟೆ ಅಬ್ಬಿ ಪವಿತ್ರವಾದ ದೇವರ ಗುಂಡಿ. ಕೋಟೆ ಬೆಟ್ಟದಲ್ಲಿರುವ ಈಶ್ವರ ದೇವಾಲಯ ಹಾಗೂ ಕಾಟ್ಲೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ್ದಂತೆ ನಡೆಯುವ ಧಾರ್ಮಿಕ ವಿಧಿವಿಧಾನಕ್ಕೆ ಮೊದಲು ಗ್ರಾಮಸ್ಥರು ದೇವರ ಗುಂಡಿಯಲ್ಲಿರುವ ಮೀನಿಗೆ ಭಕ್ತಿ ಯಿಂದ ಅಕ್ಕಿ ಹಾಕಿ ತೆರಳುತ್ತಾರೆ. ದೇವರ ಗುಂಡಿಯಲ್ಲಿ ಸ್ಥಳೀಯ ಪ್ರಬೇಧಕ್ಕೆ ಸೇರಿದ ಬೃಹತ್ ಮೀನುಗಳಿವೆ. ದೇವರ ಮೀನುಗಳೆಂದು ಪರಿಗಣಿಸಿರುವ ಸ್ಥಳೀಯರು ಗ್ರಾಮಸ್ಥರು ಈ ಮೀನುಗಳನ್ನು ಹಿಡಿಯುವುದಿಲ್ಲ. ದೇವರಗುಂಡಿಗೆ ಆಗಮಿಸುವ ಪ್ರವಾಸಿಗರಿಂದ ಕ್ಷೇತ್ರದ ಪಾವಿತ್ರೃತೆಗೆ ಧಕ್ಕೆಯಾಗುತ್ತಿದೆ ಎಂಬ ಅಸಮಾಧಾನ ಗ್ರಾಮಸ್ಥರಲ್ಲಿದೆ.

ಸೇತುವೆ ನಿರ್ಮಾಣ
ಕೋಟೆ ಅಬ್ಬಿ ಜಲಪಾತದ ಹತ್ತಿರ ೪೦ ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ೨೦೦೦ನೇ ಇಸವಿಯಲ್ಲಿ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ಮೇಲೆಯಿಂದ ಕೋಟೆ ಅಬ್ಬಿ ಜಲಪಾತವನ್ನು ವೀಕ್ಷಿಸಬಹುದಾಗಿದೆ. ಈ ಮೊದಲು ಇದ್ದಂತೆ ಜಲಪಾತದ ಹತ್ತಿರ ಹೋಗಲು ಸಾಧ್ಯವಾಗುತ್ತಿಲ್ಲ.

**
ವಾಹನ ನಿಲುಗಡೆ ಮಾಡಲು ಸರ್ಕಾರಿ ಜಾಗ ಇಲ್ಲದ್ದರಿಂದ ರಸ್ತೆ ಬದಿ ವಾಹನ ನಿಲುಗಡೆ ಮಾಡಬೇಕಾಗಿತ್ತು. ಅನಾಹುತದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿದ್ದರಿಂದ ವಾಹನ ನಿಲುಗಡೆ ಶುಲ್ಕ ವಸೂಲಾತಿ ನಿಲ್ಲಿಸಲಾಗಿದೆ. ಮುಂದಿನ ಗ್ರಾಮಸಭೆಯಲ್ಲಿ ಮತ್ತೊಮ್ಮೆ ಈ ವಿಷಯ ಕುರಿತು ಚರ್ಚಿಸಲಾಗುವುದು. ಕನ್ನಿಕಂಡ ಶ್ಯಾಮ್ ಸುಬ್ಬಯ್ಯ, ಅಧ್ಯಕ್ಷರು, ಮಕ್ಕಂದೂರು ಗ್ರಾಮ ಪಂಚಾಯಿತಿ.

**
ಮೂವರು ಪ್ರವಾಸಿಗರು ಮೃತಪಟ್ಟ ಬಳಿಕ ಹತ್ತಿರದಿಂದ ಜಲಪಾತ ವೀಕ್ಷಣೆಗೆ ಇದ್ದ ಅವಕಾಶ ತಡೆಹಿಡಿಯಲ್ಪಟ್ಟಿದೆ. ಅಗತ್ಯ ಮುಂಜಾಗೃತ ಕ್ರಮ ತೆಗೆದುಕೊಳ್ಳುವುದರೊಂದಿಗೆ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಬೇಕಾಗಿದೆ. ಗ್ರಾಮಸ್ಥರನ್ನು ಗ್ರಾಮ ಪಂಚಾಯಿತಿ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಹಂಚೆಟ್ಟೀರ ಮನು ಮುದ್ದಪ್ಪ, ಸ್ಥಳೀಯರು, ಆವಂಡಿ ಗ್ರಾಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net