ಬಸವ ತತ್ವ ಪ್ರಸಾರ ಇಂದಿನ ಅಗತ್ಯ, ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ

IMG-20230526-WA0012.jpg
Published on

ಹುಬ್ಬಳ್ಳಿ: ಬಸವ ನಾಡಿನಲ್ಲಿಯೇ ಶರಣ ತತ್ವಗಳ ಬಗ್ಗೆ ಜನರಲ್ಲಿ ಅರಿವು ಕಡಿಮೆಯಾಗಿದೆ. ಈ ದಿಸೆಯಲ್ಲಿ ಎಲ್ಲೆಡೆ ಬಸವ ತತ್ವ ಪ್ತಸಾರ ಕಾರ್ಯ ನಡೆಯಬೇಕಿದೆ ಎಂದು ಸಾಹಿತಿ ಪ್ರೊ. ಸಿದ್ದಣ್ಣ ಲಂಗೋಟಿ ಹೇಳಿದರು.

ಇಲ್ಲಿಯ ಮೂರುಸಾವಿರ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಲಿಂ. ಡಾ. ಜಗದ್ಗುರು ಗಂಗಾಧರ ರಾಜಯೋಗಿಂದ್ರ ಸ್ವಾಮೀಜಿಗಳ ೨೦ನೇ ಪುಣ್ಯಸ್ಮರಣೋತ್ಸವದಲ್ಲಿ `ಡಾ.ಮೂಜಗಂ ಸಾಹಿತ್ಯ ಪ್ರಶಸ್ತಿ' ಸ್ವೀಕರಿಸಿ ಅವರು ಮತನಾಡಿದರು.

ಜಗತ್ತಿನ ೧೩೨ ದೇಶಗಳಿಗೆ ಬಸವಾದಿ ಶರಣರ ವಚನ ಸಾಹಿತ್ಯ ಪಸರಿಸಿದೆ. ಆದರೂ, ಶರಣರ ಚಿಂತನೆ, ತತ್ವ-ಸಿದ್ದಾಂತಗಳ ಬಗ್ಗೆ ನಮಗೇ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ವಿಷಾದದ ಸಂಗತಿ ಎಂದರು.

ಜಗತ್ತಿನ ೪೬ ದೇಶಗಳಲ್ಲಿನ ಬಸವ ಅನುಯಾಯಿಗಳು ಸಮಿತಿ ಒಕ್ಕೂಟ ರಚಿಸಿಕೊಂಡಿದ್ದಾರೆ. ಪ್ರತಿ ತಿಂಗಳು ವಚನ ಸಾಹಿತ್ಯದ ಅನುವಾದ ಕಾರ್ಯಾಗಾರ ಅಲ್ಲಿ ನಡೆಯುತ್ತಿದೆ ಎಂದರು.

ಜರ್ಮನ್, ಫ್ರೆಂಚ್, ಗ್ರೀಕ್, ಸ್ಪೇನ್ ಸೇರಿದಂತೆ ೫೦ ಭಾಷೆಗಳಲ್ಲಿ ವಚನ ಸಾಹಿತ್ಯ ಅನುವಾದವಾಗುತ್ತಿದೆ. ಇನ್ನೆರಡು ವರ್ಷಗಳಲ್ಲಿ ಇಡೀ ಜಗತ್ತಿಗೆ ಬಸವಾದಿ ಶರಣರ ವಿಚಾರಗಳು ತಲುಪಲಿವೆ ಎಂದರು.

ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಪ್ರೊ. ಸಿದ್ದಣ್ಣ ಲಂಗೋಟಿ ಅವರು ಶರಣ ಸಾಹಿತ್ಯದಲ್ಲಿ ಅಪಾರ ಸೇವೆ ಮಾಡಿದ್ದಾರೆ. ವಚನ ಸಾಹಿತ್ಯದ ಮೇಲೆ ೮೩ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಧರ್ಮಪತ್ನಿ ಕಲ್ಯಾಣಮ್ಮ ಲಂಗೋಟಿ ಅವರೂ ೨೨ ಪುಸ್ತಕ ಬರೆದಿದ್ದು, ಶರಣ ಸಾಹಿತ್ಯದಲ್ಲಿ ಸಾಮರಸ್ಯ ಉಂಟು ಮಾಡುತ್ತಿದ್ದಾರೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನೂತನ ಸಂಸತ್ ಭವನದಲ್ಲಿ ಅನುಭವ ಮಂಟಪದ ಮಾದರಿ ನಿರ್ಮಾಣ ಮಾಡುವಂತೆ ಸಂಸದರಿಗೆ ಮತ್ತು ರಾಜ್ಯಸಭೆ ಸದಸ್ಯರಿಗೆ ಪತ್ರ ಬರೆಯಲಾಗಿದೆ ಎಂದರು

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸಂಕಷ್ಟದ ಪರಿಸ್ಥಿತಿ ಎದುರಾದಾಗ ಇಡೀ ರಾಜ್ಯಕ್ಕೇ ಮಾರ್ಗದರ್ಶನ ಮಾಡಿದ ಖ್ಯಾತಿ ಮೂರುಸಾವಿರ ಮಠಕ್ಕಿದೆ. ಈ ಮಠದ ಉತ್ತರೋತ್ತರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಪ್ರೊ. ಸಿದ್ದಣ್ಣ ಲಂಗೋಟಿ ಹಾಗೂ ದಂಪತಿಗೆ ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ವಿರಕ್ತ ಮಠದ ಬಸವಲಿಂಗ ಸ್ವಾಮೀಜಿ, ರೇವಣಸಿದ್ದೇಶ್ವರ ಮಠದ ಅಭಿವನ ರೇವಣಸಿದ್ಧೇಶ್ವರ ಸ್ವಾಮೀಜಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ವಿ.ಪ ಸದಸ್ಯ ಮೋಹನ ಲಿಂಬಿಕಾಯಿ ಹಾಗೂ ಕೆ.ಎಲ್.ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net