

ವಿಜಯಪುರ: ಮೊಹರಂ ಭಾವೈಕತೆಯ ಹಬ್ಬವಾಗಿದ್ದು, ಎಲ್ಲರೂ ಒಗ್ಗೂಡಿ ಆಚರಿಸುತ್ತಿರುವುದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದಲ್ಲಿ ಶನಿವಾರ ಮೊಹರಂ ಹಬ್ಬದ ಅಂಗವಾಗಿ ಲಾಲಸಾಹೇಬ ದೇವರ ದರ್ಶನ ಮಾಡಿದ ಬಳಿಕ ಅವರು ಮಾತನಾಡಿದರು.
ಮೊಹರಂ ಭಾವೈಕತೆಯ ಸಂಕೇತ. ದೇವರು ಜಿಲ್ಲೆ, ನಾಡು ಹಾಗೂ ದೇಶಕ್ಕೆ ಒಳಿತನ್ನು ಮಾಡಲಿ. ಎಲ್ಲೆಡೆ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. ತಿಗಣಿಬಿದರಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮೊಹರಂ ಆಚರಣೆ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ. ಲಾಲಸಾಹೇಬ ದೇವರು ಗ್ರಾಮಸ್ಥರಿಗೆ ಉತ್ತಮ ಆಯುಷ್ಯ, ಆರೋಗ್ಯ ನೀಡಲಿ ಎಂದು ಶುಭ ಕೋರಿದರು.
ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಮಹೇಶ ಮಾಳಿ, ಬುಡ್ಡಾಸಾಬ ದಳವಾಯಿ, ಲಾಲಸಾಬ ಕಮಟೆ, ರಾಜು ಗಲಗಲಿ, ಶಂಕರಗೌಡ ಹಲಗಣಿ, ಲಕ್ಷ್ಮಣ ಅಡಳ್ಳಿ, ಶಿವಗೊಂಡ ಅಥಣಿ ಮತ್ತಿತರರಿದ್ದರು.